ಬೆಂಗಳೂರು : ಮಗನೊಂದಿಗೆ ವಿವಾಹವಾಗಿ ಒಂದು ವರ್ಷ ಕಳೆದರೂ ಮಕ್ಕಳಾಗಿಲ್ಲ, ಹೀಗಾಗಿ ತನ್ನೊಂದಿಗೆ ಸಂಸಾರ ಮಾಡು ಎಂದು ಮಾವನೋರ್ವ ತನ್ನ ಸೊಸೆಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಭದ್ರ ಸ್ವಾಮಿ ಲೇಔಟ್ ನಿವಾಸಿ ಸಂತ್ರಸ್ತ ಮಹಿಳೆ ಕೊಟ್ಟ ದೂರಿನ ಮೇರೆಗೆ ಮಾವ ರಾಮಯ್ಯ, ಪತಿ ಯೋಗೇಶ್, ಅತ್ತೆ ಗಂಗಮ್ಮ ಸೇರಿ ಐವರ ವಿರುದ್ಧ ಬ್ಯಾಡರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಮಹಿಳೆಯು ಪಾಲಕರು ನಿಶ್ಚಯಿಸಿದಂತೆ ಒಂದು ವರ್ಷದ ಹಿಂದೆ ಯೋಗೇಶ್‌ನನ್ನು ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ಯೋಗೇಶ್ ಕುಟುಂಬಸ್ಥರು 6 ಲಕ್ಷ ರೂ. ಹಾಗೂ 104 ಗ್ರಾಂ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ತೆಗೆದುಕೊಂಡಿದ್ದರು.
ಆದರೆ ಮೊದಲ ರಾತ್ರಿ ವೇಳೆ ಪತಿ ತನ್ನನ್ನು ಮುಟ್ಟಲಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಗಂಡನಿಗೆ ತಪಾಸಣೆ ಮಾಡಿಸಿದಾಗ ಮಕ್ಕಳಾಗುವುದಿಲ್ಲ ಎಂದು ವೈದ್ಯರು ಸೂಚಿಸಿದ್ದರು. ಅವರ ಸಲಹೆ ಮೇರೆಗೆ ಪತಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಇದಾದ ಬಳಿಕವೂ ಪತಿ ಸರಿ ಹೋಗಲಿಲ್ಲ. ಇದೇ ವಿಚಾರಕ್ಕೆ ಅತ್ತೆ, ಮಾವ ಅವಾಚ್ಯವಾಗಿ ನಿಂದಿಸಿ ಸಂಬಂಧಿಕರ ಮುಂದೆ ನನ್ನನ್ನು ಅವಮಾನಿಸಿದ್ದರು. ಅಲ್ಲದೆ, ಐವಿಎಫ್ ಟೆಸ್ಟ್ ಮಾಡಿಸಿ ಗರ್ಭಕೋಶಕ್ಕೆ ಹಾನಿಯಾಗುವ ಮಾತ್ರೆ ಕೊಡಿಸಿದ್ದಾರೆ ಎಂದು ದೂರಿದ್ದಾಳೆ.
ಅಲ್ಲದೆ ಮಾವ ರಾಮಯ್ಯ, ಎಲ್ಲರಿಗೂ ಮಕ್ಕಳಾಗುತ್ತವೆ, ನಿನಗೇಕೆ ಆಗುವುದಿಲ್ಲ? ನನ್ನ ಜೊತೆ ಸಂಸಾರ ಮಾಡು ಬಾ ಎಂದು ಕಿರುಕುಳ ನೀಡಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.