ಬೆಂಗಳೂರು: ನಿಷ್ಠೆ, ಪ್ರಾಮಾಣಿಕತೆ ಹಾಗೂ ಭಕ್ತಿಗೆ ಇನ್ನೊಂದು ಹೆಸರಾಗಿರುವ ಆಂಜನೇಯ ಹುಟ್ಟಿದ ದಿನ ಇಂದು, ಹನುಮ ಜಯಂತಿ ಹೆಸರಿನಲ್ಲಿ ರಾಜ್ಯಾದ್ಯಂತ ಅತ್ಯಂತ ವಿಜೃಂಭಣೆಯಿಂದ ವಾಯುಪುತ್ರನ ಆರಾಧನೆ ಮಾಡಲಾಗುತ್ತಿದೆ.
ಬೆಂಗಳೂರಿನ ನೂರಾರು ಆಂಜನೇಯ ದೇವಾಲಯಗಳಲ್ಲಿ ಇಂದು ವಿಶೇಷ ಅಲಂಕಾರ ಮಾಡಿ ಹನುಮನನ್ನು ಪೂಜಿಸಲಾಗುತ್ತಿದೆ. ಭಕ್ತಾದಿಗಳು ಬೆಳಗ್ಗಿನಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ದೇವಾಲಯಗಳಿಗೆ ಆಗಮಿಸಿ ಪೂಜೆ ಸಲ್ಲಿಸಿ ತೆರಳುತ್ತಿದ್ದಾರೆ. ಕೊರೊನಾ ಆತಂಕದ ಹಿನ್ನೆಲೆ ದೇವಾಲಯಗಳಲ್ಲಿ ಉದ್ದನೆ ಸರದಿ ಸಾಲು ಕಂಡುಬರದಿದ್ದರೂ, ಭಕ್ತಾದಿಗಳ ಆಗಮನಕ್ಕೇನೂ ಕೊರತೆ ಎದುರಾಗಿಲ್ಲ.
ಕಷ್ಟ ಹೇಳಿಕೊಳ್ಳುವ ಭಕ್ತರು ಶ್ರೀರಾಮಚಂದ್ರನ ಪ್ರಜ್ಞಾವಂತ ಹಾಗೂ ನಿಷ್ಠಾವಂತ ಭಕ್ತ ಎಂದು ಗುರುತಿಸಿಕೊಂಡಿರುವ ಆಂಜನೇಯ ಸ್ವಾಮಿಯ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡರೆ ಶ್ರೀರಾಮಚಂದ್ರನ ಮುಂದೆ ಹೇಳಿಕೊಂಡಂತೆ. ಆಂಜನೇಯನ ಮೂಲಕ ಶ್ರೀರಾಮ ತಮ್ಮ ಕಷ್ಟವನ್ನು ನಿವಾರಣೆ ಮಾಡುತ್ತಾನೆ ಎಂಬ ನಂಬಿಕೆ ಸಾಕಷ್ಟು ಭಕ್ತರಲ್ಲಿ ಇದೆ. ಈ ಹಿನ್ನೆಲೆ ಹನುಮ ಜಯಂತಿ ಸಂದರ್ಭ ಸಾಕಷ್ಟು ಸಂಖ್ಯೆಯಲ್ಲಿ ಜನ ದೇವಾಲಯಗಳಿಗೆ ತೆರಳಿ ಹನುಮನ ಆಶೀರ್ವಾದ ಪಡೆದು ತಮ್ಮ ಕಷ್ಟಗಳನ್ನು ಹೇಳಿಕೊಂಡು ವಾಪಸಾಗುತ್ತಾರೆ.
ಒಂದಿಷ್ಟು ಗೊಂದಲ:
ಆಂಜನೇಯ ಹುಟ್ಟಿದ ಸ್ಥಳ ಮತ್ತು ದಿನಾಂಕದ ಬಗ್ಗೆ ಹಲವು ಗೊಂದಲಗಳು ಈಗಲೂ ಇವೆ. ಉತ್ತರ ಭಾರತದ ಹಲವೆಡೆ ಪ್ರಚಲಿತದಲ್ಲಿರುವಂತೆ ಆಂಜನೇಯ ಕೃಷ್ಣ ಚತುರ್ದಶಿ ಅಂದರೆ ಕಾರ್ತಿಕ ಮಾಸದ ಆರಂಭಕ್ಕೆ ಒಂದು ದಿನ ಮೊದಲು ಜನಿಸಿದ ಎಂದು ನಂಬಲಾಗುತ್ತದೆ. ಆದರೆ ಇನ್ನೊಂದು ನಂಬಿಕೆ ಪ್ರಕಾರ ಚೈತ್ರ ಮಾಸದ ಶುಕ್ಲ ಪೌರ್ಣಮಿಯಂದು ಜನಿಸಿದ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆ ಹಲವೆಡೆ ಹನುಮ ಜಯಂತಿಯನ್ನು ಎರಡು ಸಾರಿ ಆಚರಿಸುವುದು ಕಂಡು ಬರುತ್ತದೆ. ಇಂದು ಆಚರಣೆಯಾಗುತ್ತಿರುವ ಹನುಮ ಜಯಂತಿ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಆಚರಣೆಯಾಗುತ್ತಿದೆ. ಇದರಲ್ಲಿ ಜನವರಿ ಹಾಗೂ ಡಿಸೆಂಬರ್ ತಿಂಗಳ ಮಧ್ಯದಲ್ಲಿ ಹನುಮ ಜಯಂತಿ ಬರುತ್ತದೆ ಎಂದು ವಿವರಿಸಲಾಗಿದೆ. ಮಾರ್ಗಶಿರ ಮಾಸದ ಶುಕ್ಲಪಕ್ಷದ ತ್ರಯೋದಶಿಯಂದು ಹನುಮ ಜಯಂತಿ ಆಚರಣೆ ಆಗುತ್ತದೆ ಎಂದು ವಿವರಿಸಲಾಗಿದೆ.
ಜನನ ಗೊಂದಲ:
ಹನುಮ ಜನಿಸಿದ ಸ್ಥಳ ನೋಡುವುದಾದರೆ ಎರಡು ಸ್ಥಳಗಳನ್ನು ಉಲ್ಲೇಖಿಸಲಾಗುತ್ತದೆ. ಇಂದಿನ ಹಂಪಿ ಪ್ರದೇಶವನ್ನು ರಾಮಾಯಣದ ಸಂದರ್ಭದಲ್ಲಿ ಕಿಂದೆ ಎಂದು ಗುರುತಿಸಲಾಗುತ್ತಿತ್ತು. ಇದು ಒಂದು ಸುಗ್ರೀವ ರಾಜನಾಗಿದ್ದ ಸ್ಥಳವಾಗಿದ್ದು, ಹನುಮಂತನ ತಂದೆ ಕೇಸರಿಯೂ ಇದೇ ಸ್ಥಳದಲ್ಲಿ ವಾಸವಾಗಿದ್ದ ಎಂದು ಉಲ್ಲೇಖಿಸಲಾಗುತ್ತದೆ. ಇನ್ನೊಂದು ಮಾಹಿತಿ ಪ್ರಕಾರ ಗುಜರಾತ್ನ ಸಾಂಗ್ ಜಿಲ್ಲೆಯ ಜನರು ಇಲ್ಲಿನ ಗುಹೆಯಲ್ಲಿ ಅಂಜನಿಗೆ ಪುತ್ರನಾಗಿ ಆಂಜನೇಯ ಜನಿಸಿದ ಎಂದು ಹೇಳಲಾಗುತ್ತದೆ. ಒಟ್ಟಾರೆ ಏನೇ ಇರಲಿ ಈ ಎರಡು ದಿನಗಳು ಆಂಜನೇಯನನ್ನು ಆರಾಧಿಸಿದರೆ ಫಲ ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಏನು ಮಾಡಬೇಕು?
ಪವಿತ್ರ ಸ್ನಾನ, ಧ್ಯಾನ:
ಹನುಮ ಜಯಂತಿ ಸಂದರ್ಭ ಪವಿತ್ರ ನದಿ ಕೊಳಗಳಲ್ಲಿ ಸ್ನಾನಮಾಡಿ ಸಿಂಧೂರ ತಿಲಕ, ಲಡ್ಡು, ಬಾಳೆಹಣ್ಣುಗಳನ್ನು ನೈವೇದ್ಯವಾಗಿ ಆಂಜನೇಯನಿಗೆ ಅರ್ಪಿಸಲಾಗುತ್ತದೆ. ಆಂಜನೇಯನ ಮೆಚ್ಚಿಸಲು ಹನುಮಾನ್ ಚಾಲೀಸ, ಸುಂದರಕಾಂಡ, ಬಜರಂಗ ಬಾನ್ ಮತ್ತು ರಾಮಾಯಣವನ್ನು ಪಠಿಸಿದರೆ ಒಳ್ಳೆಯದು ಎಂಬ ಭಾವನೆ ಇದೆ. ಆಂಜನೇಯನಿಗೆ ಮಲ್ಲಿಗೆ ಎಣ್ಣೆಯಲ್ಲಿ ಸಿಂಧೂರವನ್ನು ಬೆರೆಸಿ ಹಚ್ಚಬೇಕು, ಮಲ್ಲಿಗೆ ಅಥವಾ ಸಾಸಿವೆ ಎಣ್ಣೆಯಿಂದ ಆಂಜನೇಯನಿಗೆ ದೀಪ ಬೆಳಗಿದರೆ ಶ್ರೇಷ್ಠ ಎಂಬ ನಂಬಿಕೆ ಭಕ್ತರಲ್ಲಿದೆ.
ಒಟ್ಟಾರೆ ಇಂದು ನಾಡಿನಲ್ಲೆಡೆ ಹನುಮ ಜಯಂತಿಯನ್ನು ಸಂಭ್ರಮ ಹಾಗೂ ಭಯ-ಭಕ್ತಿಯಿಂದ ಆಚರಿಸಲಾಗುತ್ತಿದೆ.