ಕೆಆರ್ಪುರ/ಬೆಂಗಳೂರು: ಇಂಗ್ಲಿಷ್ ಮಾಧ್ಯಮದ ವ್ಯಾಮೋಹಕ್ಕೆ ಬಿದ್ದು ಕನ್ನಡ ಶಾಲೆಗಳನ್ನು ಕಡೆಗಣಿಸುವ ಆರೋಪವಿದ್ದರೂ ಕೂಡ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ. ಅತ್ಯುತ್ತಮ ಶಿಕ್ಷಣ ನೀಡುವ ಜತೆ ಮಕ್ಕಳ ಭವಿಷ್ಯ ರೂಪಿಸವಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಕೆ.ಆರ್ಪುರ ಕ್ಷೇತ್ರದ ರಾಮಮೂರ್ತಿ ನಗರದ ಅಂಬೇಡ್ಕರ್ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಶಾಲೆಯನ್ನು ಇಂದು ಸಚಿವ ಬೈರತಿ ಬಸವರಾಜ್ ಉದ್ಘಾಟನೆ ಮಾಡಿದರು. ಶಾಲೆಯಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದ್ದು ಶಾಲಾ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸೈನ್ಸ್ ಲ್ಯಾಬ್ ಹಾಗೂ ಕರಕುಶುಲ ತರಬೇತಿ ನೀಡಲು ಅಂಬೇಡ್ಕರ್ ನಗರದ ಸರ್ಕಾರಿ ಶಾಲೆ ಸಜ್ಜಾಗಿದೆ.
ಮನೆಯಲ್ಲಿಯೇ ಸಿಗುವಂತಹ ಮತ್ತು ಹೊರಗೆ ಬಿಸಾಡಿದ ಕಸದಲ್ಲಿ ಸಿಕ್ಕ ವಸ್ತುಗಳು, ಪೇಪರ್, ಪ್ಲಾಸ್ಟಿಕ್‌ಗೆ ಜೀವ ತುಂಬಿ ಹೊಸ ಹೊಸ ವಿನ್ಯಾಸದಲ್ಲಿ ತರಹೇವಾರಿ ಕರಕುಶಲ ವಸ್ತುಗಳನ್ನು ತಯಾರಿಸಿದ ಸರ್ಕಾರಿ ಶಾಲೆಯ ಮಕ್ಕಳು ಇಂದು ಪ್ರದರ್ಶನಕ್ಕಿಟ್ಟಿದ್ದರು. ಮಕ್ಕಳ ಕಸೂತಿ ಕಂಡು ಬೆರಗಾದ ಸಚಿವರು ವಿದ್ಯಾರ್ಥಿಗಳ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
![Handicraft exhibition](https://etvbharatimages.akamaized.net/etvbharat/prod-images/kn-bng-01-kasakkejeevathumbidagovtschoolstudents-vis-ka10002_01072021180634_0107f_1625142994_781.jpg)
ಕರಕುಶಲ ವಸ್ತುಗಳ ಪ್ರದರ್ಶನದಲ್ಲಿ ರೇಷ್ಮೆದಾರ, ಉಲನ್ ದಾರ, ಪ್ಲಾಸ್ಟಿಕ್ ವೈರ್, ಬಾಗಿಲು ಪರದೆ, ಟೇಬಲ್ ಕ್ಲಾಥ್, ಮಕ್ಕಳ ಹೊದಿಕೆ ಶಾಲು, ಗರಂ ಟೋಪಿ, ಚಿತ್ತಾರದ ಕ್ಯಾಪ್, ಬೊಂಬೆ, ಬಾಸ್ಕೆಟ್ ಬ್ಯಾಗ್, ಕರವಸ್ತ್ರ, ಹಡಗು, ನಾವಿ, ತೆಪ್ಪ, ಕಿವಿ ಓಲೆ, ಹೇರ್‌ಬ್ಯಾಂಡ್, ಮುತ್ತಿನ ಮರ, ಮುತ್ತಿನ ಸರ, ಮುತ್ತಿನ ಬಳೆ, ತೊಟ್ಟಿಲು, ಬುತ್ತಿ ಡಬ್ಬಿಯ ಹೊದಿಕೆ ಮೇಣದ ಬತ್ತಿ ತಯಾರಿಕೆ, ಹರಿದ ಸೀರೆಗಳಿಂದ ಮ್ಯಾಟ್ ತಯಾರಿಸುವುದು, ಆಟದ ಸಾಮಾನುಗಳು, ಫ್ಲವರ್ ಪಾಟ್, ಪಕ್ಷಿಗಳ ಪ್ರತಿಕೃತಿ, ದೇವರ ಚಿತ್ರ,ಮಕ್ಕಳ ಬಟ್ಟೆ, ಅಲಂಕಾರಿಕ ಹೂವಿಗಳು, ಪೇಪರ್ ಗ್ರೀಟಿಂಗ್ ಕಾರ್ಡ್ಸ್ ಮುಂತಾದ ವಸ್ತುಗಳನ್ನು ಮಕ್ಕಳೇ ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು.
![Handicraft exhibition](https://etvbharatimages.akamaized.net/etvbharat/prod-images/kn-bng-01-kasakkejeevathumbidagovtschoolstudents-vis-ka10002_01072021180634_0107f_1625142994_108.jpg)
ಶಿಕ್ಷಕಿ ತುಳಸಾಬಾಯಿ ಮಾತನಾಡಿ ಪಠ್ಯಪುಸ್ತಕದ ಜೊತೆಯಲ್ಲಿ ವೃತ್ತಿ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು, ಓದು ಮಾತ್ರವಲ್ಲದೆ ಮಕ್ಕಳು ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸುವ ಕಲೆಯನ್ನು ತಿಳಿಸುವ ಮೂಲಕ ಅವರಿಗೆ ಜೀವನೋಪಾಯಕ್ಕೆ ಕರಕುಶಲ ಕಲೆಯನ್ನು ಕಲಿಸಲಾಗುತ್ತಿದೆ. ಕಸದಿಂದ ರಸ ತೆಗೆಯವ ಕಲೆಯನ್ನು ಮಕ್ಕಳು ಕಲಿಯುತ್ತಿದ್ದಾರೆ. ಮನೆಯಲ್ಲಿ ಬಡತನದಿಂದ ಇದ್ದ ಒಬ್ಬ ವಿದ್ಯಾರ್ಥಿ ಈ ಕರಕುಶಲ ಮಾಡುವ ಮೂಲಕ ತನ್ನ ಜೀವನವನ್ನು ರೂಪಿಸಿಕೊಂಡಿದ್ದಾನೆ. ಮನೆಯಲ್ಲಿ ವಿವಿಧ ರೀತಿಯ ಶಾಲು, ಸ್ವೆಟ್ಟರ್, ಮಕ್ಕಳ ಸಾಕ್ಸ್, ಗ್ಲೌಸ್ಗಳನ್ನ ತಯಾರಿಸಿ ಮಾರುವ ಮೂಲಕ ಮನೆಯಲ್ಲಿನ ಕಷ್ಟವನ್ನು ಕಡಿಮೆ ಮಾಡಿದ್ದಾನೆ ಎಂದರು.