ಬೆಂಗಳೂರು: ಕೊರೊನಾ ಕಾರಣದಿಂದಾಗಿ ಅಪರಾಧ ಚಟುವಟಿಕೆಗಳು ಕಡಿಮೆಯಾಗಿದೆ. ಆದರೆ ಸೈಬರ್ ಖದೀಮರ ಹಾವಳಿ ಮಾತ್ರ ಜಾಸ್ತಿಯಾಗಿದೆ. ಆನ್ಲೈನ್ನಲ್ಲಿ ಕೆಲಸ ಹುಡುಕುವವರು ಹಾಗೆ ಆನ್ಲೈನ್ನಲ್ಲೇ ಜಾಸ್ತಿ ಹೊತ್ತು ಇರುವವರನ್ನೇ ಟಾರ್ಗೆಟ್ ಮಾಡಿಕೊಂಡು ಸೈಬರ್ ಖದೀಮರು ಹಣ ಲೂಟಿ ಮಾಡ್ತಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ವಾಸವಿದ್ದ ನಾಗಭೂಷಣ್ ಎಂಬುವವರು ಕೆಲಸಕ್ಕಾಗಿ ಆನ್ಲೈನ್ ಮೊರೆ ಹೋಗಿ, ಕೆಲ ವೆಬ್ಸೈಟ್ಗಳಿಗೆ ಲಾಗಿನ್ ಆಗಿದ್ದಾರೆ. ವೆಬ್ಸೈಟ್ಗೆ ಲಾಗಿನ್ ಆಗುತ್ತಿದ್ದಂತೆ ಅಪರಿಚಿತರಿಂದ ಕರೆ ಬಂದು ತಾವು ಶೈನ್ ಡಾಟ್ ಕಾಮ್ನಿಂದ ಕರೆ ಮಾಡುತ್ತಿದ್ದೇವೆ. ನೀವು ಕೆಲಸಕ್ಕಾಗಿ ವೆಬ್ಸೈಟ್ ಲಾಗಿನ್ ಆಗಿದ್ರಿ, ನಿಮ್ಮ ಪ್ರೊಫೈಲ್ ಅಪ್ರೂವಲ್ ಆಗಿದೆ ಎಂದಿದ್ದಾರೆ.
ನಾಗಭೂಷಣ್ ಕೆಲಸ ಸಿಗುವ ಖುಷಿಯಲ್ಲಿ ಖದೀಮರು ಹೇಳಿದ್ದನ್ನೆಲ್ಲಾ ನಂಬಿದ್ದಾರೆ. ಈ ವೇಳೆ ಆರೋಪಿಗಳು ನಾವು ನಿಮಗೆ ರೆಫರೆನ್ಸ್ ಐಡಿ ನೀಡುತ್ತೇವೆ. ಕೇವಲ 10 ರೂಪಾಯಿ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪೇ ಮಾಡಬೇಕು, ಕೆಳಗೆ ಲಿಂಕ್ ಬರುತ್ತೆ ನೀವು ಅದನ್ನು ಕ್ಲಿಕ್ ಮಾಡಿದ್ರೆ ಪೇಮೆಂಟ್ ಆಗುತ್ತದೆ ಎಂದು ಹೇಳಿದ್ದಾರೆ.
ನಾಗಭೂಷಣ್ ಅಕೌಂಟ್ ಖಾಲಿ:
ಇನ್ನು ನಾಗಭೂಷಣ್ ಈ ಸಂದರ್ಭದಲ್ಲಿ ಕೆಲಸ ಸಿಗುವ ಖುಷಿಯಲ್ಲಿ 10 ರೂಪಾಯಿ ಹಾಕಿ ಅರ್ಜಿ ತುಂಬಿ ಆರೋಪಿಗಳು ಕಳುಹಿಸಿದ ಲಿಂಕ್‌ಗೆ ಹಣ ಹಾಕಿದ್ದಾರೆ. ಇನ್ನೂ ಸಿಸ್ಟಮ್ನಲ್ಲಿ ಅರ್ಜಿ ಹಾಕುವಾಗ ಎರೆರ್ ಎಂದು ತೋರಿಸಿದ್ದ ಹಿನ್ನೆಲೆಯಲ್ಲಿ ಅಕೌಂಟ್ನಿಂದ ಹಣ ಕಟ್ಟಾಗಿದ್ದರ ಬಗ್ಗೆ ನಿಗಾ ವಹಿಸಿಲ್ಲ. ತದ ನಂತರ ವಿಚಾರ ತಿಳಿದು ಕೂಡಲೇ ನಂಬರ್ಗೆ ಕರೆ ಮಾಡಿ ಎರರ್ ಬರ್ತಿದೆ ಎಂದು ತಿಳಿಸಿದಾಗ ಒಟಿಪಿ ಬರುತ್ತೆ ನಿಮ್ಮ ನಂಬರ್ಗೆ ಅದನ್ನು ಹಾಕಿ ಎಂದಿದ್ದಾರೆ. ಒಟಿಪಿ ಹಾಕಿದ ಕೂಡಲೇ ಮತ್ತೆ ಎರರ್ ಬಂದಿದೆ. ಆದರೆ ಅಕೌಂಟ್ನಿಂದ 40 ಸಾವಿರ ರೂಪಾಯಿ ಡೆಬಿಟ್ ಆಗಿದೆ.
ಕೂಡಲೇ ಕರೆ ಕಟ್ ಆದ ಕಾರಣ ಅನುಮಾನ ಬಂದು ಮೊಬೈಲ್ಗೆ ಬಂದ ಮೆಸೇಜ್ ನೋಡಿದ್ದ ನಾಗಭೂಷಣ್ ಪ್ರಜ್ಞೆ ತಪ್ಪಿದಂತಾಗಿದೆ. ಏಕಂದ್ರೆ ಅಕೌಂಟ್ನಿಂದ 40 ಸಾವಿರ ಹಣ ಸೈಬರ್ ಖದೀಮರ ಪಾಲಾಗಿತ್ತು. ಬಳಿಕ ಕರೆ ಮಾಡಿದ್ರೆ ಸ್ವಿಚ್ ಆಫ್ ಆಗಿದ್ದು ಸದ್ಯ ದಕ್ಷಿಣ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಿಟಿಯಲ್ಲಿ ಸೈಬರ್ ಹಾವಳಿ ಹೆಚ್ಚಾದ ಹಿನ್ನೆಲೆ ಈ ಕುರಿತು ಕಮಿಷನರ್ ಭಾಸ್ಕರ್ ರಾವ್ ಸೈಬರ್ ಟೀಂ ಜೊತೆ ಸಭೆ ನಡೆಸಿದ್ದಾರೆ. ಬೆಂಗಳೂರು ನಗರದಲ್ಲಿ ಸೈಬರ್ ಹ್ಯಾಕರ್ಸ್ಗಳ ಹಾವಳಿ ಹೆಚ್ಚಾಗ್ತಿದೆ. ಈ ಬಗ್ಗೆ ಸೈಬರ್ ಟೀಂ ಅಲರ್ಟ್ ಇರಬೇಕು ನಗರದಲ್ಲಿ ಸೈಬರ್ ಹಾವಳಿ ತಪ್ಪಿಸಿ ಆರೋಪಿಗಳ ಹೆಡೆಮುರಿಕಟ್ಟುವಂತೆ ಸೂಚಿಸಿದ್ದಾರೆ.