ಬೆಂಗಳೂರು: ಗೂಂಡಾ ಕಾಯ್ದೆಯಡಿ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಅಧೀನ ಕಾರ್ಯದರ್ಶಿ (ಕಾನೂನು ಮತ್ತು ಸುವ್ಯವಸ್ಥೆ), ಬೆಂಗಳೂರು ನಗರ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗದ ಡಿಸಿಪಿ, ಸಿಸಿಬಿಯ ಎಸಿಪಿ, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನೊಟೀಸ್ ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಿತು.
ಅರ್ಜಿದಾರ ಪುನೀತ್ ಕೆರೆಹಳ್ಳಿ ಅವರನ್ನು ಕರ್ನಾಟಕದ ಅಪಾಯಕಾರಿ ಚಟುವಟಿಕೆಗಳ ತಡೆಗಟ್ಟುವಿಕೆ, ಕಾಳಧನಿಕರು, ಮಾದಕವಸ್ತು ಅಪರಾಧಿಗಳು, ಜೂಜುಕೋರರು, ಗೂಂಡಾಗಳು, ಅನೈತಿಕ ಕಳ್ಳಸಾಗಣೆ ಅಪರಾಧಿಗಳು, ಸ್ಲಂ ಕಬಳಿಕೆದಾರರು ಮತ್ತು ವಿಡಿಯೋ ಅಥವಾ ಆಡಿಯೋ ಪೈರೇಟ್ಸ್ ಕಾಯ್ದೆ-1985ರಡಿ ಬಂಧಿಸಲಾಗಿದೆ. ಈ ಬಂಧನ ರಾಜಕೀಯ ಒತ್ತಡದ ಕಾರಣಕ್ಕೆ ಆಗಿದೆ. 2023 ಆಗಸ್ಟ್ 11ರಂದು ನಗರ ಪೊಲೀಸ್ ಆಯುಕ್ತರು ಹೊರಡಿಸಿದ ಬಂಧನದ ಆದೇಶ ಹಾಗೂ ಆ.17 ಅದಕ್ಕೆ ಒಪ್ಪಿಗೆ ನೀಡಿದ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿಯ ಆದೇಶ ಎರಡೂ ಕಾನೂನುಬಾಹಿರವಾಗಿದೆ.
ಈ ಪ್ರಕರಣದಲ್ಲಿ ಕಾನೂನು ಮತ್ತು ತಾಂತ್ರಿಕ ಅಂಶಗಳ ಸಾಕಷ್ಟು ಲೋಪಗಳಿವೆ. ಅರ್ಜಿದಾರರ ವಿರುದ್ಧ ಕ್ಷುಲ್ಲಕ ಹಾಗೂ ಆಧಾರರಹಿರ ಆರೋಪಗಳನ್ನು ಮಾಡಲಾಗಿದೆ. ಅರ್ಜಿದಾರರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಬಂಧನದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಆ ಎಲ್ಲಾ ಪ್ರಕರಣಗಳು ವಿಚರಣಾ ಮತ್ತು ತನಿಖಾ ಹಂತದಲ್ಲಿವೆ. ಯಾವ ಪ್ರಕರಣದಲ್ಲೂ ಅರ್ಜಿದಾರರ ಜಾಮೀನನ್ನು ಪೊಲೀಸರು ಆಕ್ಷೇಪಿಸಿಲ್ಲ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಆದ್ದರಿಂದ ಅರ್ಜಿದಾರರನ್ನು ಕರ್ನಾಟಕದ ಅಪಾಯಕಾರಿ ಚಟುವಟಿಕೆಗಳ ತಡೆಗಟ್ಟುವಿಕೆ, ಕಾಳಧನಿಕರು, ಮಾದಕವಸ್ತು ಅಪರಾಧಿಗಳು, ಜೂಜುಕೋರರು, ಗೂಂಡಾಗಳು, ಅನೈತಿಕ ಕಳ್ಳಸಾಗಣೆ ಅಪರಾಧಿಗಳು, ಸ್ಲಂ ಕಬಳಿಕೆದಾರರು ಮತ್ತು ವಿಡಿಯೋ ಅಥವಾ ಆಡಿಯೋ ಪೈರೇಟ್ಸ್ ಕಾಯ್ದೆ-1985ರಡಿ ನಗರ ಪೊಲೀಸರು ಆ.11ರಂದು ಹೊರಡಿಸಿರುವ ಹಾಗೂ ಅದನ್ನು ಅನುಮೋದಿಸಿ ಆ.17ರಂದು ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶಗಳನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ಇದನ್ನೂ ಓದಿ: ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ಬಂಧನ