ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರೇ ಅಧ್ಯಕ್ಷರು. ಬೇರೆಯವರು ಅಧ್ಯಕ್ಷರಾಗಿದ್ದರೂ ಕುಮಾರಸ್ವಾಮಿಯೇ ಅಧ್ಯಕ್ಷರಾಗಿರುತ್ತಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಟಾಂಗ್ ಕೊಟ್ಟರು.
ವಿಧಾನಸೌಧದಲ್ಲಿ ಗುರುವಾರ ಸಿ.ಎಂ.ಇಬ್ರಾಹಿಂ ಉಚ್ಛಾಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದೆಲ್ಲ ನಾವು ನೋಡದಿರುವ ವಿಚಾರವಲ್ಲ. ಏನೂ ವಿಶೇಷವೂ ಇಲ್ಲ. ಅನುಭವ ಇದ್ದುಕೊಂಡು ಇಬ್ರಾಹಿಂ ಅಲ್ಲಿಗೆ ಹೋಗಿದ್ದರು. ಅವರು ಇಲ್ಲೇ ಇದ್ದಿದ್ರೆ ಗೌರವ ಇರುತ್ತಿತ್ತು ಎಂದರು.
ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಆ ಬಗ್ಗೆ ಸಿ.ಎಂ.ಇಬ್ರಾಹಿಂ ತೀರ್ಮಾನ ಮಾಡಬೇಕು. ಪಕ್ಷ ಸೇರ್ಪಡೆಗೊಳಿಸುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು. ಒಕ್ಕಲಿಗರನ್ನು ತುಳಿದರು ಎಂಬ ಆರೋಪಕ್ಕೆ, ಅದು ಬಹಳ ದೂರ ಹೋಗಿರುವ ವಿಚಾರ. ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಜೆಪಿ ಸೇರುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.
ದಾಖಲೆ ಇದ್ರೆ ಕುಮಾರಸ್ವಾಮಿ ಬಿಡುಗಡೆ ಮಾಡಲಿ- ಸಚಿವ ಕೆ.ಜೆ.ಜಾರ್ಜ್: ಇಂಧನ ಇಲಾಖೆಯಲ್ಲಿ ಲೂಟಿ ಆಗಿರುವ ಆರೋಪ ಮಾಡುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಮೊದಲು ದಾಖಲೆ ಬಿಡುಗಡೆ ಮಾಡಲಿ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದವರು. ಅವರಲ್ಲಿ ಇರುವ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಲಿ. ಆ ನಂತರ ನಾನು ಮಾತನಾಡುವೆ. ಯಾರು ಯಾರು ದುಡ್ಡು ಕೊಟ್ಟಿದ್ದಾರೆ ಎಂದು ಹೇಳಲಿ ಎಂದರು.
ಕಾನೂನುಬಾಹಿರವಾಗಿ ಯಾರೇ ಏನೂ ಮಾಡಿದ್ರು ಕೂಡ ಕಾನೂನು ಪ್ರಕಾರ ಕ್ರಮ ತೆಗೆದು ಕೊಳ್ಳಲಾಗುವುದು. ಅವರು ದಾಖಲೆ ಬಿಡುವಾಗ ಗೊತ್ತಾಗುತ್ತದೆ. ಈಗಲೇ ಏಕೆ ಉತ್ತರ ಕೊಡಬೇಕು. ಆವತ್ತು ಏನೋ ದಾಖಲೆ ಇಟ್ಟಿದ್ರಲ್ಲ?. ಪೆನ್ ಡ್ರೈವ್ ತೋರಿಸಿದ್ರಲ್ಲ. ಅಂದು ನಿಮ್ಮ ಮುಂದೆ ತೋರಿಸಿದ್ರಲ್ಲ. ಅದನ್ನು ಮೊದಲು ಬಿಡುಗಡೆ ಮಾಡಲಿ ಎಂದು ತಿರುಗೇಟು ನೀಡಿದರು.
ವಿದ್ಯುತ್ ಖರೀದಿ ಮಾಡುತ್ತೇವೆ. ನಮ್ಮ ಬಳಿ ಫಂಡ್ ಇದೆ. ಯಾರು ಫಂಡ್ ಇಲ್ಲ ಅಂತ ಹೇಳಿದ್ದು ಎಂದು ಸಚಿವರು ಕೇಳಿದರು.