ಬೆಂಗಳೂರು: ಎಸ್ಟಿ ವರ್ಗದ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸೌಲಭ್ಯ ಹೆಚ್ಚಿಸಲು ಒತ್ತಾಯಿಸಿ ಕಳೆದ 175 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಇಂದು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಧರಣಿ ಕೈಬಿಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಸ್ವಾಮೀಜಿಗಳು 175 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಯಾರು ಮಂತ್ರಿಗಳು ಇಲ್ಲವೇ?. ಯಾವುದೇ ಸಚಿವರು ಸ್ವಾಮೀಜಿ ಅವರನ್ನು ಭೇಟಿಯಾಗಿಲ್ಲ ಎಂದು ಕಿಡಿಕಾರಿದರು. ಹಿಂದೆ ಇದೇ ಬಿಜೆಪಿಯವರು ನಮ್ಮ ಸರ್ಕಾರದ ವಿರುದ್ಧ ಶ್ರೀಗಳನ್ನ ಎತ್ತಿ ಕಟ್ಟಿದ್ದರು. ಇವತ್ತು ಅವರು ಸ್ವಾಮೀಜಿಿಗೆ ಕೊಟ್ಟ ಗೌರವ ಏನು? ಎಂದು ಪ್ರಶ್ನಿಸಿದರು.
ಸ್ವಾಮೀಜಿಗಳು ಕೂಡಲೇ ಧರಣಿ ವಾಪಸ್ ಪಡೆಯಬೇಕು. ಹಠ ಮಾಡಬೇಡಿ. ನಿಮ್ಮ ಹೋರಾಟದ ಬಗ್ಗೆ ಕುಳಿತು ಮಾತನಾಡೋಣ. ನಿಮ್ಮ ಆರೋಗ್ಯ ಮುಖ್ಯ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬಂದರೆ ಮೊದಲು ನಿಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಮಾತು ಕೊಟ್ಟು ಉಳಿಸಿಕೊಂಡಿಲ್ಲ. ಕೂಡಲೇ ಸಚಿವರು ಸ್ಥಳಕ್ಕೆ ಹೋಗಿ ಸ್ವಾಮೀಜಿ ಅವರ ಬೇಡಿಕೆ ಕೇಳಬೇಕು. ಕೂಡಲೇ ಶ್ರೀಗಳು ಧರಣಿ ಕೈಬಿಡಬೇಕು ಎಂದು ಹೆಚ್ಡಿಕೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್. ಎಂ. ರಮೇಶ್ ಗೌಡ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಓದಿ: ನನ್ನ ಮತ್ತು ಡಿಕೆಶಿ ನಡುವೆ ಬಿರುಕಿದೆ ಎಂಬ ತಪ್ಪು ಮಾಹಿತಿಯನ್ನು ಜನರಿಗೆ ನೀಡಲಾಗುತ್ತಿದೆ: ಸಿದ್ದರಾಮಯ್ಯ