ಬೆಂಗಳೂರು : ಕೋವಿಡ್-19 ಹೆಸರಿನಲ್ಲಿಯೂ ಲೂಟಿ ಹೊಡೆಯುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಕಾಮಾಕ್ಷಿಪಾಳ್ಯದಲ್ಲಿ ಇಂದು ಜೆಡಿಎಸ್ ಮುಖಂಡರಿಂದ ಜನರಿಗೆ ಉಚಿತ ಆಹಾರ ದಿನಸಿ ಸಾಮಗ್ರಿ ವಿತರಣೆಗೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹೇಳಿರುವಂತೆ 45 ದಿನಗಳಲ್ಲಿ ಕಾರ್ಮಿಕರಿಗೆ ಮೂರು ಹೊತ್ತು ಊಟಕ್ಕಾಗಿ 11 ಸಾವಿರ ಕೋಟಿ ರೂ. ಖರ್ಚು ಮಾಡಿದ್ದರೆ, ಕಾರ್ಮಿಕರು ಪರದಾಡುವ ಪರಿಸ್ಥಿತಿ ಏಕೆ ಬರುತಿತ್ತು ಎಂದು ಪ್ರಶ್ನಿಸಿದರು.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಸಾಲದ ರೂಪದಲ್ಲೋ ಅಥವಾ ಪರಿಹಾರದ ರೂಪದಲ್ಲೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಶೇಷ ಪ್ಯಾಕೇಜ್ಗಳ ಅಸಲಿ ಬಣ್ಣವನ್ನು ಮುಂದಿನ ದಿನಗಳಲ್ಲಿ ಬಯಲು ಮಾಡುವುದಾಗಿ ಹೇಳಿದರು. ಲಾಕ್ಡೌನ್ ಸಂದರ್ಭದಲ್ಲಿ ಘೋಷಣೆ ಮಾಡಿರುವ ಪ್ಯಾಕೇಜ್ಗಳು ಜನರಿಗೆ ನಿಜವಾಗಿಯೂ ತಲುಪಿದೆಯೇ?. ಜನರಿಗೆ ಟೋಪಿ ಹಾಕುವ ಕೆಲಸ ನಡೆಯುತ್ತಿದೆ. ಆದರೆ, ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಅಂತಹ ಕೆಲಸ ಮಾಡಲಿಲ್ಲ. ರಾಜ್ಯ ಸರ್ಕಾರದ ಆಹಾರ ಸಾಮಗ್ರಿ ಬಡವರಿಗೆ ತಲುಪಿದ್ದರೆ ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ಜನರು ಮುಗಿಬೀಳುತ್ತಿರುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಂದು ಆಹಾರ ವಿತರಿಸುವಾಗ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದಕ್ಕೆ ಕ್ಷಮೆ ಕೋರುವುದಾಗಿ ಹೇಳಿದರು.
ಪ್ರಕೃತಿಯ ವಿಕೋಪದಲ್ಲಿಯೂ ಪರಿಹಾರ ನೀಡುವುದನ್ನು ಬಿಟ್ಟು ಸರ್ಕಾರ ಸಾಲ ಪಡೆಯಿರಿ ಎಂದು ಪ್ಯಾಕೇಜ್ ಘೋಷಿಸಿರುವುದು ಬಡವರ ಬದುಕಿನ ಜೊತೆಗೆ ಚೆಲ್ಲಾಟವಾಗಿದೆ. ಯಾವುದೇ ಸರ್ಕಾರ ಕೇವಲ ಖಜಾನೆ ತುಂಬಿಸುವ ಕೆಲಸ ಮಾಡದೇ ಜನರಿಗೆ ಹತ್ತಿರವಾಗುವಂತಹ ಕೆಲಸ ಮಾಡಬೇಕು. ರಾಜ್ಯಸರ್ಕಾರ ಆಟೋ ಚಾಲಕರು ಸೇರಿದಂತೆ ವಿವಿಧ ಬಡವರಿಗೆ 5 ಸಾವಿರ ರೂ. ನೀಡಿದ್ದರೆ, 2.50 ಕೋಟಿ ರೂ. ಬೇಕಾಗಿತ್ತು. ಕೇಂದ್ರ ಸರ್ಕಾರ ನಿತ್ಯ ಪ್ಯಾಕೇಜ್ ಘೋಷಣೆ ಮಾಡುತ್ತಲೇ ಇದೆ. ಕೆಲಸವಿಲ್ಲದ 40 ಕೋಟಿ ಜನರಿಗೆ 10 ಸಾವಿರ ರೂ. ನೀಡಿದ್ದರೂ, 40 ಕೋಟಿ ಸಾಕಾಗುತ್ತಿತ್ತು ಎಂದು ಹೇಳಿದರು.