ಬೆಂಗಳೂರು: ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಒಳ್ಳೆಯ ಸಂಸದನಾಗುವುರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಜ್ವಲ್ ಈಗ ಸಂಸದನಾಗಿದ್ದಾನೆ. ಅವನು ಸಂಸತ್ನಲ್ಲಿ ಹಾಸನ ಮಾತ್ರವಲ್ಲ, ರಾಜ್ಯದ ಎಲ್ಲ ಜಿಲ್ಲೆಗಳ ಬಗ್ಗೆ ಚರ್ಚೆ ಮಾಡುತ್ತಾನೆ. ಆ ಬಗ್ಗೆ ಕೆಲಸ ಮಾಡುವಂತೆ ಸೂಚಿಸಿದ್ದೇನೆ, ಸಂಸತ್ನ ಮೊದಲ ಭಾಷಣದಲ್ಲಿ ರಾಜ್ಯದ ಬಹುತೇಕ ಎಲ್ಲಾ ಸಮಸ್ಯೆಗಳ ಬಗ್ಗೆ ಮಂಡಿಸಿದ್ದಾನೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಹೋರಾಟ ನಡೆಸಿ, ರಾಜ್ಯಕ್ಕೆ ಒಳ್ಳೆಯ ಸಂಸದನಾಗುವುರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಇನ್ನು ನಿಖಿಲ್ ಕುಮಾರಸ್ವಾಮಿಗೆ ಇನ್ಮುಂದೆ ಸಿನಿಮಾ ಎಲ್ಲಾ ಬೇಡ ಅಂತ ಹೇಳಿದ್ದೇನೆ. ಈಗಿರುವ ಒಂದೇ ಒಂದು ಸಿನಿಮಾಕ್ಕೆ ನಾನು ಡಬ್ಬಿಂಗ್ ಮುಗಿಸಬೇಕೆಂದು ಮನವಿ ಮಾಡಿದ್ದಾನೆ. ಅದರಂತೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಅಲ್ಲದೆ ಸದ್ಯ ಜೆಡಿಎಸ್ ಯುವ ಘಟಕದ ಜವಾಬ್ದಾರಿಯನ್ನು ನಡೆಸುತ್ತಿದ್ದಾನೆ ಎನ್ನುವ ಬದಲು ತಪ್ಪಿ ಕಾಂಗ್ರೆಸ್ ಯುವ ಘಟಕ ಎಂದು ಹೇಳಿದರು. ಆದರೆ, ಅದು ಪಕ್ಕದಲ್ಲಿದ್ದ ಯಾರಿಗೂ ಕೂಡ ಅರಿವಿಗೆ ಬರಲಿಲ್ಲ. ತಾವು ಪ್ರತಿದಿನ ಎಲ್ಲವನ್ನೂ ಗಮನಿಸುತ್ತಿದ್ದು, ಕೆ.ಆರ್ ಪೇಟೆಯ ಉಪ ಚುನಾವಣೆಯ ಸ್ಪರ್ಧೆ ಬಗ್ಗೆ ಸದ್ಯ ಯಾವುದೇ ಚರ್ಚೆಯಾಗಿಲ್ಲ ಎಂದು ದೇವೇಗೌಡ ತಿಳಿಸಿದರು.