ಬೆಂಗಳೂರು : ಮಾದಕ ವಸ್ತುಗಳಿಂದ ಸಾವು ಸಂಭವಿಸುತ್ತದೆ ಎಂದು ಗೊತ್ತಿದ್ದರೂ ಇಂದಿನ ಪೀಳಿಗೆ ಗಾಂಜಾ, ಅಫೀಮು, ಗುಟ್ಕಾ, ತಂಬಾಕುಗಳಿಗೆ ಮಾರು ಹೋಗುತ್ತಿದೆ.
ಅದರಲ್ಲೂ ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುವ ಗುಟ್ಕಾ, ಪಾನ್ ಮಸಾಲಗಳಿಗೆ ಬಹುತೇಕರು ದಾಸರಾಗುತ್ತಿದ್ದಾರೆ. ತಂಬಾಕು ಹಾಗೂ ಗುಟ್ಕಾ ಸೇವನೆಯಿಂದ ಕ್ಯಾನ್ಸರ್ ರೋಗಕ್ಕೀಡಾಗುವ ಅಪಾಯ ಹೆಚ್ಚಿರುತ್ತದೆ. ಆದರೂ ಜನರು ಅಗಿಯುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ.
ತಂಬಾಕು ಮತ್ತು ನಿಕೋಟಿನ್ ಅಂಶ ಒಳಗೊಂಡ ಗುಟ್ಕಾವನ್ನು ನಿಷೇಧಿಸಿಲಾಗಿದೆ. ತಂಬಾಕುಯುಕ್ತ ಆಹಾರ ಪದಾರ್ಥಗಳನ್ನ ಮಾರಾಟ ಮಾಡಲು ಅವಕಾಶವಿದೆ.
ಗುಟ್ಕಾದಲ್ಲಿನ ತಂಬಾಕು ಪದಾರ್ಥ ಬೇರ್ಪಡಿಸಿ ಪಾನ್ ಮಸಾಲ್ ಮಾರಾಟ ಮಾಡಲಾಗುತ್ತಿದೆ. ನಿಷೇಧಿತ ಗುಟ್ಕಾಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ದಾಳಿ ಮಾಡಿ, ಪ್ರಕರಣ ದಾಖಲಿಸಲಾಗುತ್ತಿದೆ.
ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಗುಟ್ಕಾ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಕೇವಲ ಪಾನ್ಮಸಾಲ ಪದಾರ್ಥವನ್ನ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಗುಟ್ಕಾ ಮಾರಾಟ ಹಾಗೂ ಪೂರೈಕೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು. ತಂಬಾಕು ಸೇವನೆಯಿಂದ ಕಳೆದ ವರ್ಷ ಹತ್ತು ಮಂದಿಯಲ್ಲಿ ಕ್ಯಾನ್ಸರ್ ಕಾಯಿಲೆ ಕಾಣಿಸಿದೆ.
ಯುವ ಸಮೂಹ ಗುಟ್ಕಾಗೆ ಹೊಂದಿಕೊಂಡು ತಮ್ಮ ಜೀವನವನ್ನೇ ನರಕ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಬೆಣ್ಣೆ ನಗರಿಯಲ್ಲಿ ಮಾತ್ರ ಈ ಬಗ್ಗೆ ಜಾಗೃತಿ ನಡೆಯುತ್ತಿದ್ದು, ಯುವ ಸಮೂಹ ಇದರಿಂದ ಹೊರ ಬಂದಿರುವ ಶುಭ ಸುದ್ದಿಯೊಂದನ್ನು ಅಧಿಕಾರಿಗಳು ನೀಡಿದ್ದಾರೆ. ಗುಟ್ಕಾ ನಿಯಂತ್ರಣಕ್ಕೆ ಅಂಗಡಿಗಳ ಮೇಲೆ ದಾಳಿಗಳು ನಡೆಯುತ್ತಿದ್ದು, ದಂಡ ಕೂಡ ವಿಧಿಸಲಾಗುತ್ತಿದೆ.
ದಾವಣಗೆರೆಯಲ್ಲಿ ಈ ಬಾರಿಯ ವರದಿ ಪ್ರಕಾರ 25 ರಿಂದ 30 ವರ್ಷದ ವಯೋಮಿತಿಯ ಯುವಕರು ಈ ಗುಟ್ಕಾ ವ್ಯಾಮೋಹದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. 14 ರಿಂದ 21 ವಯಸ್ಸಿನ ಶೇ.25ರಷ್ಟು ಯುವಕರು ಗುಟ್ಕಾ ಸೇವನೆ ಮಾಡುತ್ತಿಲ್ಲವೆಂದು ವರದಿ ಹೇಳುತ್ತಿದೆ.
ಮೈಸೂರು ನಗರ ವ್ಯಾಪ್ತಿಯಲ್ಲಿ ನಿಷೇಧಿತ ಗುಟ್ಕಾ ಮಾರಾಟವಿಲ್ಲ. ಆದರೂ ಅಕ್ರಮ ಗುಟ್ಕಾ ತಡೆಯಲು ಆರೋಗ್ಯ ಇಲಾಖೆಯಿಂದ ತಂಡ ರಚನೆ ಮಾಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿದರೆ ದಾಳಿ ಮಾಡಿ ದಂಡ ವಿಧಿಸಲಾಗುತ್ತದೆ. ಗುಟ್ಕಾ, ಪಾನ್ ಮಸಾಲಾ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆಯ ಸಾಲು ಪ್ಯಾಕೆಟ್ ಮೇಲಿದ್ದರೂ, ಸೇವಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.