ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಆಗುತ್ತಿಲ್ಲ. ಸುಮಾರು 90ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್ ಸದನದ ಗಮನಕ್ಕೆ ತಂದರು.
ವಿಧಾನ ಪರಿಷತ್ನಲ್ಲಿ ಸಹಕಾರ ಸಚಿವರ ಗಮನ ಸೆಳೆದ ಸದಸ್ಯರು, ಈಗಾಗಲೇ ಈ ಹಗರಣದ ತನಿಖೆಗೆ ನಿಯೋಜಿತರಾಗಿದ್ದ ಇಬ್ಬರು ಅಧಿಕಾರಿಗಳು ಬದಲಾಗಿದ್ದಾರೆ. ಸರ್ಕಾರ ತನಿಖೆ ವಿಚಾರದಲ್ಲಿ ಯಾವುದೇ ಪ್ರಗತಿ ತೋರಿಸುತ್ತಿಲ್ಲ. ಹೇಗೆ ನಂಬುವುದು?. ಆರ್ಬಿಐ ಸಹ ಇದಕ್ಕೆ ಉತ್ತಮ ಗುಣಮಟ್ಟದ ಬ್ಯಾಂಕ್ ಎಂದು ಪ್ರಮಾಣಪತ್ರ ನೀಡುತ್ತದೆ. ಬಡ ಬ್ರಾಹ್ಮಣರು ಇಟ್ಟ ಹಣಕ್ಕೆ ಮೋಸವಾಗಿದೆ. 1ಸಾವಿರ ಕೋಟಿ ರೂ. ಸೀಜ್ ಆಗಿದೆ ಎಂಬ ಮಾಹಿತಿ ಇದೆ. ಅಕ್ರಮ ಎಸಗಿದವರೆಲ್ಲಾ ಜಾಮೀನಿನ ಮೇಲೆ ಹೊರಬಂದು ಆರಾಮಾಗಿ ಓಡಾಡಿಕೊಂಡಿದ್ದಾರೆ. ಸಿಐಡಿ ತನಿಖೆ ಪ್ರಗತಿ ಕಾಣುತ್ತಿಲ್ಲ. ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಅಂದರೆ ಅದು ಸರ್ಕಾರದಿಂದ ಆಗುತ್ತಿಲ್ಲ. ಜನ ವಿಷ ಕುಡಿದು ಸಾಯಲು ಮುಂದಾಗಿದ್ದಾರೆ ಎಂದರು.
ಈ ವೇಳೆ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ಯು.ಬಿ. ವೆಂಕಟೇಶ ಅಧ್ಯಕ್ಷತೆಯಲ್ಲಿ ಎರಡು- ಮೂರು ಸಭೆ ಮಾಡಿದ್ದೇವೆ. ಸಿಐಡಿ ತನಿಖೆ ನಡೆಯುತ್ತಿದೆ. ಜಸ್ವಂತ್ ರೆಡ್ಡಿ, ರಂಜಿತ್ ರೆಡ್ಡಿ ಅತಿ ಹೆಚ್ಚು ಸಾಲ ಪಡೆದವರು. ಇವರು ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಅವರನ್ನು ವಾಪಸ್ ಕರೆಸುವ ಪ್ರಯತ್ನ ನಡೆಸಿದ್ದೇವೆ. ಹೆಚ್ಚಿನ ಮೊತ್ತದ ಸಾಲ ಪಡೆದ ಇತರೆ 24 ಜನರ ವಿವರವನ್ನು ಇಡಿಗೆ ನೀಡಿದ್ದೇವೆ. ಅನೇಕ ಸದಸ್ಯರ ಹೆಸರಿನಲ್ಲಿ ಬೇರೆಯವರು ಸಾಲ ಪಡೆದಿದ್ದಾರೆ. ಸದಸ್ಯರ ಅರಿವಿಗೆ ಬಾರದೇ ಸಾಲ ನೀಡಿಕೆ ಆಗಿದೆ. ಕ್ರಮಕ್ಕೆ ಸೂಕ್ತ ನಿರ್ಧಾರ ಕೈಗೊಂಡಿದ್ದೇವೆ. ಇಡಿ ಹಾಗೂ ಸಿಐಡಿಗೆ ನೀಡಬೇಕಾದ ವಿವರ ಸಲ್ಲಿಸಿದ್ದೇವೆ. ಆಡಿಟ್ ಕಾರ್ಯ ಮುಗಿದಿದೆ. ಇದೀಗ ಅಂತಿಮ ನೋಟಿಸ್ ನೀಡಿದ್ದೇವೆ. ಕೆಲವರು ಸಾಲ ಮರುಪಾವತಿ ಮಾಡುತ್ತಿದ್ದಾರೆ. ಕೆಲವರು ನಾವು ಇಷ್ಟು ಮೊತ್ತದ ಸಾಲ ಪಡೆದಿಲ್ಲ ಎಂದಿದ್ದಾರೆ. ಅದರ ವಿವರ ಸಂಗ್ರಹ ಆಗುತ್ತಿದೆ. ಇದೇ ತಿಂಗಳ 5 ಕ್ಕೆ ಸಭೆ ನಡೆಯಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಈ ಅಧಿವೇಶನ ಮುಕ್ತಾಯಕ್ಕೆ ಮುನ್ನವೇ ಇನ್ನೊಂದು ಸಭೆ ಸೇರುತ್ತೇವೆ ಎಂದು ಹೇಳಿದರು.
ಯಾರನ್ನೂ ರಕ್ಷಿಸಲ್ಲ, ಕಠಿಣವಾಗಿ ಹಣ ವಸೂಲು ಮಾಡುತ್ತೇವೆ. ಕ್ರಮ ಕೈಗೊಳ್ಳಲಾಗುವುದು ಎಂದಾಗ ಮಧ್ಯ ಪ್ರವೇಶಿಸಿದ ವೆಂಕಟೇಶ್, ನನ್ನ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿಲ್ಲ. ನನ್ನನ್ನು ಸಭೆಗೆ ಕರೆದಿದ್ದರು. ಕೇವಲ ಮಾತು ಬೇಡ. ಕೈಗೊಂಡ ಕ್ರಮದ ವಿವರ ನೀಡಿ. ಸಮಸ್ಯೆಗೆ ಸಿಲುಕಿರುವ ಸದಸ್ಯರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಸದಸ್ಯರಿಗೆ ಕಾಲ ಕಾಲಕ್ಕೆ ಎಸ್ಎಂಎಸ್ ಮೂಲಕ ಮಾಹಿತಿ ನೀಡುವುದು, 2014 ರಿಂದ ದುರುಪಯೋಗ ಆಗುತ್ತಿದೆ. ಯಾಕೆ ಮಾಹಿತಿ ಇರಲಿಲ್ಲವೇ? ಸಾಲಗಾರರು ವಿದೇಶಕ್ಕೆ ಹೋಗಿದ್ದರೆ ಅವರ ಕುಟುಂಬ ಸದಸ್ಯರು ಇಲ್ಲಿ ಇಲ್ಲವೇ?, ಆಸ್ತಿ ಇಲ್ಲವೇ?, ವಶಕ್ಕೆ ಪಡೆದುಕೊಳ್ಳಿ. ಸರ್ಕಾರಕ್ಕೆ ಬದ್ಧತೆ ಬೇಡವೇ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣ: ಗ್ರಾಹಕರ ಮನೆ ಮೇಲೂ ಎಸಿಬಿ ದಾಳಿ
ಸಚಿವರು ಪ್ರತಿಕ್ರಿಯಿಸಿ, ಸಹಕಾರ ಇಲಾಖೆಗೆ ಕೆಲ ಮಿತಿ ಇದೆ. ಹೈಕೋರ್ಟ್, ರಿಸರ್ವ್ ಬ್ಯಾಂಕ್ ನಿರ್ದೇಶನದ ಮೇಲೆ ನಾವು ಕ್ರಮ ಕೈಗೊಳ್ಳಬೇಕು. 24 ರಲ್ಲಿ 8 ಮಂದಿ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. 8 ಸಾವಿರ ಸದಸ್ಯರಿದ್ದಾರೆ. ಎಲ್ಲರಿಗೂ ಮಾಹಿತಿ ನೀಡಲಾಗುತ್ತಿದೆ. ಎಲ್ಲಾ ಅಡೆತಡೆಯನ್ನೂ ಮೀರಿ ಒಂದಿಷ್ಟು ಕ್ರಮ ಕೈಗೊಳ್ಳುತ್ತಿದ್ದೇವೆ. 1,115 ಕೋಟಿ ರೂ. ಮೊತ್ತದ ಹಣ ಸೀಜ್ ಮಾಡಿದ್ದೇವೆ. 2-3 ಜನ ಬ್ಯಾಂಕ್ ಸಾಲ ತೀರಿಸಿ ನಾವೇ ವಹಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಮುಂಬೈನಿಂದಲೂ ಕೊಳ್ಳುಗರು ಆಗಮಿಸಿ ಆಸಕ್ತಿ ತೋರಿಸಿದ್ದಾರೆ. ರಿಸರ್ವ್ ಬ್ಯಾಂಕ್ಗೆ ಪತ್ರ ಬರೆದಿದ್ದೇವೆ. ಅವರಿಂದ ಒಪ್ಪಿಗೆ ಸಿಗುತ್ತಿದ್ದಂತೆ ಕ್ರಮ ಆಗಲಿದೆ. ಇಷ್ಟೇ ದಿನದಲ್ಲಿ ಕ್ರಮ ಆಗಲಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಅಂದರು.
ವಸಿಷ್ಟ ಸೌಹಾರ್ದ ಸಂಘದಲ್ಲಿ 85 ಕೋಟಿ ರೂ. ಅವ್ಯವಹಾರ ಆಗಿದೆ ಎಂಬ ಆರೋಪ ಇದೆ. ಇದರ ಕುರಿತು ನ್ಯಾಯಾಂಗದಿಂದ ತಡೆಯಾಜ್ಞೆ ಇತ್ತು. ಇದೀಗ ಅದರ ತೆರವು ಆಗಿದೆ. ಇದು ನಮ್ಮ ಅಡಿ ಬರಲ್ಲ. ಸೌಹಾರ್ದ ಫೆಡರೇಶನ್ ಅಡಿ ಬರುತ್ತದೆ. ಈ ಕುರಿತು ಸಂಬಂಧಿಸಿದವರನ್ನು ಕರೆಯಿಸಿ ಸಮಾಲೋಚಿಸುತ್ತೇವೆ. ವೆಂಕಟೇಶ್ ಜತೆ ಸಭೆ ನಡೆಸಿ ಹಣ ಹಿಂದಿರುಗಿಸುವ ದಿನಾಂಕ ನಿಗದಿಪಡಿಸುತ್ತೇವೆ ಎಂಬ ಭರವಸೆ ನೀಡಿದರು.
ಇದನ್ನೂ ಓದಿ: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿ ಠೇವಣಿದಾರರ ಪ್ರತಿಭಟನೆ