ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರಿಗೆ ವಂಚನೆ ಎಸಗಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿದೆ. ಇದೇ ವೇಳೆ ಬ್ಯಾಂಕ್ನ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಶ್ಯಾಮ್ ಪ್ರಸಾದ್ ಕೂಡ ವರದಿ ಸಲ್ಲಿಸಿದ್ದಾರೆ.
ಬ್ಯಾಂಕ್ ಹಗರಣದ ತನಿಖೆ ಕೋರಿ ಬಸವನಗುಡಿ ನಿವಾಸಿ ಕೆ.ಆರ್ ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರಿ ವಕೀಲರು, ಸಿಐಡಿ ಅಧೀಕ್ಷಕ ವೆಂಕಟೇಶ್ ಅವರು ನೀಡಿದ್ದ ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ಪೀಠಕ್ಕೆ ಸಲ್ಲಿಸಿದರು.
ವರದಿ ದಾಖಲಿಸಿಕೊಂಡ ಪೀಠ ಸುರಕ್ಷಿತವಾಗಿಡುವಂತೆ ರಿಜಿಸ್ಟ್ರಿಗೆ ಆದೇಶಿಸಿತು. ಅಲ್ಲದೇ, ಬ್ಯಾಂಕ್ ನ ಆಡಳಿತಾಧಿಕಾರಿ ಸಲ್ಲಿಸಿರುವ ವರದಿ ಪ್ರತಿಯನ್ನು ಎಲ್ಲ ಅರ್ಜಿದಾರರು ಹಾಗೂ ಪ್ರತಿವಾದಿಗಳಿಗೆ ಸಲ್ಲಿಸುವಂತೆ ಸೂಚಿಸಿತು. ಆರ್ ಬಿಐ ಪರ ವಕೀಲರು ಮಾಹಿತಿ ನೀಡಿ, ಸೌಹಾರ್ದ ಕಾಯಿದೆ ಸೆಕ್ಷನ್ 17ರ ಪ್ರಕಾರ ಸರ್ಕಾರ ಆಡಳಿತಾಧಿಕಾರಿಗೆ ಕೆಲ ಅಧಿಕಾರಗಳನ್ನು ನೀಡಬಹುದು ಎಂದರು.
ಈ ಕುರಿತು ಮುಂದಿನ ವಿಚಾರಣೆ ವೇಳೆ ಸಮಗ್ರ ವಿಚಾರಣೆ ನಡೆಸುವುದಾಗಿ ತಿಳಿಸಿದ ಪೀಠ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿತು.
ಈ ಮಧ್ಯ ಬ್ಯಾಂಕ್ ಪರ ವಾದಿಸಿದ ವಕೀಲ ವಿ. ಶ್ರೀನಿಧಿ, ಬ್ಯಾಂಕ್ನಿಂದ ಸಾಲ ಪಡೆದಿದ್ದ ಶ್ರೀಪತಿ ಹೆರಳೆ ಎಂಬುವರು ಸಾಲಕ್ಕೆ ಖಾತ್ರಿಯಾಗಿ ನಿವೇಶನ ನೀಡಿದ್ದರು. ಇದೀಗ ಅವರು ತೀವ್ರ ತೊಂದರೆಗೆ ಸಿಲುಕಿರುವುದರಿಂದ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲು ಸಿದ್ದರಿದ್ದು, ನಿವೇಶನದ ದಾಖಲೆಗಳನ್ನು ಹಿಂದಿರುಗಿಸಲು ಕೋರಿದ್ದಾರೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಾಲ ಮರುಪಾವತಿ ಪ್ರಸ್ತಾವಗಳನ್ನು ಪರಿಗಣಿಸಬೇಕು. ಹಾಗಾಗಿ ಈ ಪ್ರಕರಣದಲ್ಲಿ ಮನವಿ ಮಾಡಿರುವ ವ್ಯಕ್ತಿಯ ಸಾಲ ಎಷ್ಟಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ತಿಳಿಸುವಂತೆ ಬ್ಯಾಂಕ್ ಆಡಳಿತಾಧಿಕಾರಿಗೆ ಸೂಚಿಸಿತು.