ಬೆಂಗಳೂರು : ಅಪರಾಧ ಪ್ರಕರಣಗಳ ಆರೋಪಿಗಳನ್ನು ವಿಚಾರಣೆ ನಡೆಸುವ ವೇಳೆ ಪ್ರಶ್ನಾವಳಿ ಸಿದ್ಧಪಡಿಸುವಾಗ ಅನುಸರಿಸಬೇಕಿರುವ ಕ್ರಮಗಳ ಕುರಿತು ಹೈಕೋರ್ಟ್ ಮಾರ್ಗಸೂಚಿ ರೂಪಿಸಿದೆ.
ಆರೋಪಿ ನೀಡಿದ ಉತ್ತರ ಮತ್ತು ವಿವರಣೆಯನ್ನು ವಿಚಾರಣಾ ನ್ಯಾಯಾಲಯ ದಾಖಲಿಸಿಕೊಳ್ಳಬೇಕೆ ಹೊರತು ಸತ್ಯ ಮತ್ತು ಸುಳ್ಳು ಎಂಬ ಏಕ ರೂಪದ ಉತ್ತರ ಪಡೆದುಕೊಳ್ಳಬಾರದು ಎಂಬುದು ಸೇರಿ ಹಲವು ಮಾರ್ಗಸೂಚಿಗಳನ್ನು ಹೈಕೋರ್ಟ್ ರೂಪಿಸಿದೆ.
ಮೈಸೂರಿನ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣವೊಂದರ ಆರೋಪಿಗಳಿಬ್ಬರಿಗೆ ವಿಚಾರಣಾ ನ್ಯಾಯಾಲಯ ಸೂಕ್ತ ರೀತಿ ಪ್ರಶ್ನೆ ಕೇಳದ ಮತ್ತು ಅವರಿಗೆ ಅವಕಾಶ ನೀಡದ ಪ್ರಕರಣದಲ್ಲಿ ನ್ಯಾಯಮೂರ್ತಿ ಹರೀಶ್ ಕುಮಾರ್ ಅವರಿದ್ದ ಪೀಠ ಈ ಮಾರ್ಗಸೂಚಿ ರೂಪಿಸಿದೆ.
ಮಾರ್ಗಸೂಚಿಗಳು :
- ಸಾಮಾನ್ಯ ಭಾಷೆಯಲ್ಲಿ ಸಾಧ್ಯವಾದಷ್ಟು ಚಿಕ್ಕ ವಾಕ್ಯಗಳ ಪ್ರಶ್ನೆ ಸಿದ್ಧಪಡಿಸಬೇಕು.
- ಮೌಖಿಕ ಹಾಗೂ ಲಿಖಿತ ಸಾಕ್ಷ್ಯಗಳಿಂದ ದೋಷಾರೋಪ ಸಾಕ್ಷ್ಯಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು.
- ಸಾಕ್ಷಿದಾರ ಕೆಲವೊಮ್ಮೆ ಎರಡು ಮತ್ತು ಅದಕ್ಕಿಂತ ಹೆಚ್ಚು ಆರೋಪಿಗಳ ಕೃತ್ಯದ ಬಗ್ಗೆ ಸಾಕ್ಷ್ಯ ಹೇಳುವಾಗ ಒಂದೇ ಪ್ರಶ್ನೆ ಸಿದ್ಧಪಡಿಸಬೇಕು. ಪ್ರತಿ ಆರೋಪಿಯನ್ನು ವೈಯಕ್ತಿಕವಾಗಿ ಪ್ರಶ್ನೆ ಮಾಡಿ ಅವರ ಉತ್ತರವನ್ನು ಪ್ರತ್ಯೇಕವಾಗಿಯೇ ದಾಖಲಿಸಬೇಕು.
- ಎರಡು ಅಥವಾ ಅದಕ್ಕಿಂತ ಹೆಚ್ಚು ಸಾಕ್ಷಿದಾರರು ಆರೋಪಿಗಳ ಕೃತ್ಯದ ಬಗ್ಗೆ ಸಾಮೂಹಿಕ ಸಾಕ್ಷ್ಯ ನುಡಿಯುವಾಗ ಸಾಧ್ಯತೆ ಇರುವಾಗ ಒಂದೇ ಪ್ರಶ್ನೆ ಕೇಳಬಹುದು.
- ದೋಷಾರೋಪಣೆಗಳು ಇರುವ ಸಂದರ್ಭದಲ್ಲಿ ಪಟ್ಟಿ ಮಾಡಲಾಗಿರುವ ದಾಖಲೆ ಮತ್ತು ವಸ್ತುಗಳ ಕುರಿತು ಆರೋಪಿಗಳ ಗಮನ ಸೆಳೆಯಬೇಕು.
- ಔಪಚಾರಿಕ ಸಾಕ್ಷಿಗಳು ನೀಡಿದ ಸಾಕ್ಷ್ಯದ ಬಗ್ಗೆ ಆರೋಪಿಯನ್ನು ಪ್ರಶ್ನೆ ಮಾಡುವ ಅಗತ್ಯವಿಲ್ಲ.
- ಎರಡು ಅಥವಾ ಅದಕ್ಕಿಂತ ಹೆಚ್ಚು ಆರೋಪಿಗಳು ಇದ್ದು, ಅವರು ಸಾಮೂಹಿಕ ಅಪರಾಧ ಕೃತ್ಯ ಎಸಗಿದ ಸಂದರ್ಭದಲ್ಲಿ ಆರೋಪಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಶ್ನಾವಳಿ ಗುಚ್ಛ ಸಿದ್ದಪಡಿಸುವ ಅಗತ್ಯವಿಲ್ಲ. ಒಂದು ಪ್ರಶ್ನಾವಳಿ ಸಿದ್ದಪಡಿಸಿದರೆ ಸಾಕು. ನಿರ್ದಿಷ್ಟ ಆರೋಪಿಗೆ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಪ್ರಶ್ನೆ ಕೇಳಬಹುದು.
- ಆರೋಪಿಯು ನೀಡಿದ ಉತ್ತರ-ವಿವರಣೆ ದಾಖಲಿಸಿಕೊಳ್ಳಬೇಕೇ ವಿನಃ ಉತ್ತರವನ್ನು ಸತ್ಯ ಅಥವಾ ಸುಳ್ಳು ಎಂಬ ಒಂದೇ ಪದದ ಉತ್ತರ ನೀಡುವಂತೆ ಸೂಚಿಸಬಾರದು.
- ಸಿಆರ್ಪಿಸಿ ಸೆಕ್ಷನ್ 313ಕ್ಕೆ 2009ರಲ್ಲಿ ತಿದ್ದುಪಡಿ ತಂದಿರುವ ಪ್ರಕಾರ ಆರೋಪಿಗಳಿಗೆ ಕೇಳಬಹುದಾದ ಪ್ರಶ್ನೆಗಳನ್ನು ಸಿದ್ದಪಡಿಸಿಕೊಡಲು ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಧೀಶರು ಸೂಚಿಸಬಹುದು. ಅವರು ಸಿದ್ದಪಡಿಸಿಕೊಟ್ಟ ನಂತರ ಅಗತ್ಯವಿದ್ದರೆ ತಿದ್ದುಪಡಿ ಮಾಡಿಕೊಳ್ಳಬಹುದು.
- ಆರೋಪಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ದಾಖಲಿಸಿಕೊಳ್ಳುವ ಬದಲು ಆರೋಪಿಗೆ ಲಿಖಿತ ಉತ್ತರ ದಾಖಲಿಸುವಂತೆಯೂ ಸೂಚಿಸಬಹುದು.
ಹೈಕೋರ್ಟ್ ನಿರ್ದೇಶನ : ಪ್ರಶ್ನಾವಳಿ ಸಿದ್ದಪಡಿಸುವ ವೇಳೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಈ ಆದೇಶದ ಪ್ರತಿಯನ್ನು ಕಳುಹಿಸಬೇಕು. ರಾಜ್ಯ ನ್ಯಾಯಾಂಗ ಅಕಾಡೆಮಿ ಮಾದರಿ ಪ್ರಶ್ನಾವಳಿ ಸಿದ್ದಪಡಿಸಿ, ಮಾರ್ಗದರ್ಶನ ನೀಡಲು ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಕಳುಹಿಸಿಕೊಡಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ ಮೀನಾಕ್ಷಿ ಹಾಗೂ ತ್ರಿನೇತ್ರ ವಿರುದ್ಧ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 2021ರ ಫೆ.22ರಂದು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 313ರ ಅಡಿಯಲ್ಲಿ ಆರೋಪಿಗಳ ಹೇಳಿಕೆಗಳನ್ನು ರದ್ದುಪಡಿಸಿ ಹೊಸದಾಗಿ ದಾಖಲಿಸಿಕೊಳ್ಳಬೇಕು ಎಂದು ಆದೇಶಿಸಿದೆ.
ಆರೋಪಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಶ್ನಾವಳಿ ಸಿದ್ದಪಡಿಸುವುದು ವಾಡಿಕೆ. ಎಲ್ಲ ಪ್ರಶ್ನಾವಳಿ ಗುಚ್ಛದಲ್ಲಿ ಅದೇ ಪ್ರಶ್ನೆಗಳು ಪುನರಾವರ್ತನೆಯಾಗಿರುತ್ತವೆ. ಪ್ರತಿ ಆರೋಪಿಗೂ ವೈಯಕ್ತಿಕವಾಗಿ ಪ್ರಶ್ನೆ ಕೇಳಲಾಗುತ್ತದೆ. ಆರೋಪಿಗಳ ಸಂಖ್ಯೆಗೆ ಸಮನಾಗಿ ಪ್ರಶ್ನಾವಳಿ ಸಿದ್ದಪಡಿಸುವುದು ಸರಿಯಾದ ಪ್ರಕ್ರಿಯೆಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.