ಬೆಂಗಳೂರು: ಚೀನಾದಲ್ಲಿ ನಿಗೂಢ ನ್ಯುಮೋನಿಯಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ, ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕರ್ನಾಟಕ, ರಾಜಸ್ಥಾನ, ಗುಜರಾತ್, ಉತ್ತರಾಖಂಡ, ಹರಿಯಾಣ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಉಸಿರಾಟದ ಸಮಸ್ಯೆಗಳ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಮಾರ್ಗಸೂಚಿ ಹೊರಡಿಸಲಾಗಿದೆ.
ಜಾಗೃತರಾಗಿರಲು ಸೂಚನೆ; ಈ ಕುರಿತು ಕರ್ನಾಟಕ ಆರೋಗ್ಯ ಇಲಾಖೆ ಕೂಡ ಹೆಚ್ಚಿನ ಜಾಗೃತಿ ವಹಿಸುತ್ತಿದೆ. ಕಾಲೋಚಿತ ಜ್ವರದ ಬಗ್ಗೆ ನಾಗರಿಕರಲ್ಲಿ ಜಾಗೃತರಾಗಿರುವಂತೆ ಕೇಳಿಕೊಂಡಿದೆ. ಜ್ವರದ ಲಕ್ಷಣಗಳು ಮತ್ತು ಅಪಾಯಕಾರಿ ಅಂಶಗಳ ಬಗ್ಗೆ ಪಟ್ಟಿ ಮಾಡಿದೆ. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು, ಆಗಾಗ್ಗೆ ಕೈಗಳನ್ನು ತೊಳೆಯುವುದು, ಮುಖವನ್ನು ಸ್ಪರ್ಶಿಸುವುದನ್ನು ತಪ್ಪಿಸುವುದು ಮತ್ತು ಜನಸಂದಣಿ ಸ್ಥಳಗಳಲ್ಲಿ ಮಾಸ್ಕ್ ಬಳಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಗಳು ಮಾಹಿತಿ ಒದಗಿಸಬೇಕು; ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುವ ಎಲ್ಲಾ ಸಾರಿ ಹಾಗೂ ಐಎಲ್‌ಐ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಪ್ರತಿನಿತ್ಯ ಐಡಿಎಸ್‌ಪಿ - ಐಹೆಚ್‌ಐಪಿ ವೆಬ್‌ಸೈಟ್‌ಗೆ ಆಪ್‌ಲೋಡ್ ಮಾಡಬೇಕು. ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ.
ಕೋವಿಡ್ ಪ್ರಕರಣಗಳ ನಿರ್ವಹಣೆಗೆ ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲಾದ ವ್ಯವಸ್ಥೆಯನ್ನು ಮರುಪರಿಶೀಲನೆ ನಡೆಸಬೇಕು. ಜೊತೆಗೆ ಹಾಸಿಗೆ, ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್, ಔಷಧ, ಪಿಪಿಇ ಕಿಟ್, ಎನ್95 ಮಾಸ್ಕ್, ಮೆಡಿಕಲ್ ಮಾಸ್ಕ್, ಪ್ರಯೋಗಾಲಯ, ಆಂಬ್ಯುಲೆನ್ಸ್ ಮತ್ತಿತರ ವ್ಯವಸ್ಥೆಯನ್ನು ಮಕ್ಕಳ ಹಾಗೂ ವಯಸ್ಕರ ನ್ಯುಮೋನಿಯಾ ಚಿಕಿತ್ಸೆಗೆ ಸನ್ನದ್ಧಗೊಳಿಸುವಂತೆ ಆದೇಶ ನೀಡಿದೆ.
ಇದನ್ನೂ ಓದಿ: ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಲಂಚ ಸ್ವೀಕರಿಸುತ್ತಿದ್ದ ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಅಧಿಕಾರಿ ಸಿಬಿಐ ಬಲೆಗೆ
ಸಮುದಾಯ ಮಟ್ಟದ ಸರ್ವೇಕ್ಷಣ ಕಣ್ಗಾವಲು ಪಡೆ ಸಕ್ರಿಯವಾಗಿ ಕಾರ್ಯಾಚರಿಸಲು ಸೂಚಿಸಿದ್ದು, ಶಂಕಿತ ಪ್ರಕರಣಗಳು ಅಥವಾ ನ್ಯುಮೋನಿಯಾ ಹೆಚ್ಚಾಗಿ ಕಂಡುಬರುವ ಪ್ರದೇಶಗಳನ್ನು ಗುರುತಿಸಿ, ಐಹೆಚ್‌ಐಪಿಗೆ ವರದಿ ಸಲ್ಲಿಕೆ ಮಾಡಲು ಸೂಚಿಸಿದೆ. ಜತೆಗೆ ಕೋವಿಡ್ ನೆಗೆಟಿವ್ ಬಂದು ಸಾರಿ, ಐಎಲ್‌ಐನಿಂದ ಮೃತಪಟ್ಟ ವ್ಯಕ್ತಿಯ ಮಾದರಿಯನ್ನು ಸಮೀಪದ ಪ್ರಯೋಗ ಶಾಲೆಗೆ ಕಡ್ಡಾಯವಾಗಿ ರವಾನಿಸಬೇಕು. ಪರೀಕ್ಷಾ ವಿವರವನ್ನು ಕಡ್ಡಾಯವಾಗಿ ಆರೋಗ್ಯ ಇಲಾಖೆಗೆ ಸಲ್ಲಿಕೆ ಮಾಡಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಕತ್ತಲೆಯಿಂದ ಬೆಳಕಿನೆಡೆಗೆ: 41 ಕಾರ್ಮಿಕರ ಕುಟುಂಬ ನಿರಾಳ; ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ
ಸಭೆ ಕರೆದ ಆರೋಗ್ಯ ಸಚಿವರು: ಭ್ರೂಣ ಹತ್ಯೆ ಪ್ರಕರಣ ಸೇರಿದಂತೆ ಇನ್ ಫ್ಲೂಯೆಂಜಾ ತಡೆಗಟ್ಟುವುದು ಹಾಗೂ ಉತ್ತರ ಚೀನಾದ ಮಕ್ಕಳಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ ರಾಜ್ಯದಲ್ಲಿ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ.