ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಗಣ್ಯರಿಗೆ ಗೌರವ ರಕ್ಷೆ ನೀಡುವ ಪದ್ಧತಿಯನ್ನು ನಿಯಂತ್ರಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸಿಎಂ ಸೇರಿ ನಿರ್ದಿಷ್ಟ ಗಣ್ಯರಿಗೆ ಗೌರವ ರಕ್ಷೆ ಸಲ್ಲಿಸುವುದು ಪೊಲೀಸ್ ಕವಾಯತು ಕೈಪಿಡಿಯ ಪ್ರಕಾರ ತುಂಬಾ ಹಳೆಯ ಪದ್ಧತಿ.
ಆದರೆ, ಸಾರ್ವಜನಿಕ ಸ್ಥಳಗಳಾದ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಹೋಟೆಲ್‌ಗಳು, ಪ್ರವಾಸಿ ಮಂದಿರ, ಕಾರ್ಯಕ್ರಮ ನಡೆಯುವ ಸ್ಥಳ ಇತ್ಯಾದಿ ಸ್ಥಳಗಳಲ್ಲಿ ಗೌರವ ರಕ್ಷೆ ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿದೆ. ಇದಲ್ಲದೇ, ಗೌರವ ರಕ್ಷೆಯನ್ನು ಒಂದೇ ದಿನ ಹಲವಾರು ಸ್ಥಳಗಳಲ್ಲಿ ಸಲ್ಲಿಸುತ್ತಿರುವುದೂ ಗಮನಕ್ಕೆ ಬಂದಿದೆ. ಇಂತಹ ಪದ್ಧತಿಗಳು ಗೌರವ ರಕ್ಷೆಯ ಪಾವಿತ್ರ್ಯತೆಗೆ ಕುಂದು ಬರುವುದಲ್ಲದೇ, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತವೆ. ಹೀಗಾಗಿ ಸರ್ಕಾರ ಗೌರವ ರಕ್ಷೆ ಸಂಬಂಧ ಕೆಲ ಸೂಚನೆಗಳನ್ನು ನೀಡಿದೆ.
ಹೊಸ ಸೂಚನೆ ಏನು?:- ಸರ್ಕಾರದ ಕಚೇರಿಗಳ ಆವರಣದಲ್ಲಿ ಮಾತ್ರ ಗೌರವ ರಕ್ಷೆ ಸಲ್ಲಿಸಬೇಕು
- ಗೌರವ ರಕ್ಷೆಯನ್ನು ಗಣ್ಯರು ಆಗಮಿಸಿದಾಗ ಮಾತ್ರ ಸಲ್ಲಿಸಬೇಕು ಮತ್ತು ಆ ದಿನದಲ್ಲಿ ಒಂದು ಬಾರಿ ಮಾತ್ರ ಸಲ್ಲಿಸಬೇಕು
- ಗಣ್ಯರು ನಿರ್ಗಮಿಸುವಾಗ ಗೌರವ ರಕ್ಷೆಯನ್ನು ಸಲ್ಲಿಸುವ ಪದ್ಧತಿಯನ್ನು ಕೈಬಿಡಬೇಕು
- ಈ ಸೂಚನೆಗಳು ರಾಜ್ಯಪಾಲರು ಮತ್ತು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಭೇಟಿಗೆ ಅನ್ವಯವಾಗುವುದಿಲ್ಲ.