ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಂಪೂರ್ಣ ವಿಫಲವಾಗಿವೆ ಎಂದು ವಿಧಾನ ಪರಿಷತ್ನ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ. ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯುವನಿಧಿ ಯೋಜನೆಯಿಂದ ಯುವಜನತೆಗೆ ವಂಚಿಸಿದ್ದಾರೆ. ಯುವನಿಧಿಯಂತೂ ಸಂಪೂರ್ಣ ವಿಫಲವಾಗಿದೆ. ಯುವನಿಧಿ ಸರಿಯಾಗಿ ಜಾರಿಯಾದರೆ 10 ಸಾವಿರ ಕೋಟಿ ರೂ. ಬೇಕು ಎಂದರು.
ಯುವನಿಧಿ ಬಿಡುಗಡೆ ಮಾಡಿದ್ದೇವೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಪೂರೈಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಪದವಿ ಆದವರಿಗೆ 3 ಸಾವಿರ ರೂ, ಡಿಪ್ಲೋಮಾ ಆದವರಿಗೆ ಒಂದೂವರೆ ಸಾವಿರ ರೂಪಾಯಿ ಕೊಡುತ್ತೇವೆ ಎಂದಿದ್ದರು. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಯುವಜನರಿದ್ದಾರೆ. ಸರ್ಕಾರ ಕೇವಲ 6-7 ನೂರು ಕೋಟಿ ರೂ. ಖರ್ಚು ಮಾಡಿ ಯುವನಿಧಿ ಎನ್ನುತ್ತಿದೆ. ಗೃಹ ಲಕ್ಷ್ಮಿ ಹಣ ಕೂಡ ಮೊದಲ ಕಂತು ಮಾತ್ರ ಬಂದಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಯತ್ನಾಳ್ ಹಾಗೂ ಇತರ ಅಸಮಾಧಾನಿತರ ಕುರಿತು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲವೂ ಕೂಡ ಹೈಕಮಾಂಡ್ ಗಮನಿಸುತ್ತದೆ. ರಾಜ್ಯಾಧ್ಯಕ್ಷರು ಕೂಡ ಗಮನಿಸುತ್ತಾರೆ ಎಂದಷ್ಟೇ ಹೇಳಿದರು. ಕನ್ನಡ ಬೋರ್ಡ್ ಅಭಿಯಾನ ಕರವೇ ಹೋರಾಟದ ಕುರಿತು ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಸೌರ್ವಭೌಮ. ಯಾವುದೇ ಹಿಂಸಾತ್ಮಕ ಕೃತ್ಯಗಳಿಗೆ ಅವಕಾಶ ಕೊಡಬಾರದು. ಅಹಿತಕರ ಘಟನೆಗೆ ಅವಕಾಶ ನೀಡದೆ ಸರ್ಕಾರ ಕನ್ನಡ ಫಲಕ ಹಾಕಿಸುವ ಕೆಲಸ ಮಾಡಬೇಕು ಎಂದರು.
ನಾಗರಹಾವು ತಲೆನೋವು ಬಂದಾಗ ಏನು ಮಾಡುತ್ತದೆ?: ನೂತನ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಮಾತನಾಡಿ, ನಾಗರಹಾವಿಗೆ ತಲೆ ನೋವು ಬಂದಾಗ ಏನು ಮಾಡುತ್ತದೆ ಗೊತ್ತೇ?. ನಾಗರಹಾವಿಗೆ ತಲೆ ನೋವು ಬಂದಾಗ ತಲೆ ಚಚ್ಚಿಕೊಂಡು ಸಾಯುತ್ತದೆ. ಇವಾಗ ಅವರು ತಲೆ ನೋವು ಬಂದು ತಲೆ ಚಚ್ಚಿಕೊಳ್ತಿದ್ದಾರೆ. ನಾಗರಹಾವಿಗೆ ಔಷಧಿ ಕೂಡ ಇದೆ, ಸೂಕ್ತ ಸಂದರ್ಭದಲ್ಲಿ ಔಷಧಿ ಕೊಡುತ್ತೇವೆ. ಆ ಕಾಲವು ಬಂದಿದೆ ಎಂದು ಹೇಳಿದರು. ಯತ್ನಾಳ್ ವಿರುದ್ಧ ಸೂಕ್ತ ಕ್ರಮದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದೆ. ಆದಷ್ಟು ಬೇಗನೇ ಕ್ರಮದ ಬಗ್ಗೆಯೂ ಪಕ್ಷ ತೀರ್ಮಾನ ಮಾಡುತ್ತದೆ ಎಂದರು.
ಇದನ್ನೂ ಓದಿ: ಯತ್ನಾಳ್ ಸತ್ಯ ಹೇಳಿದ್ದಾರೆ, ಸರ್ಕಾರ ಕ್ರಮ ಕೈಗೊಳ್ಳುವುದು ಒಳ್ಳೆಯದು: ಸಚಿವ ಮಧು ಬಂಗಾರಪ್ಪ