ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ’ಗೃಹಜ್ಯೋತಿ’ ಜಾರಿಗೆ ಸಕಲ ಸಿದ್ಧತೆ ನಡೆದಿದ್ದು ಅನುಷ್ಠಾನಕ್ಕೆ ಒಂದು ದಿನ ಮಾತ್ರ ಬಾಕಿ ಇದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ ಪಂಚಖಾತ್ರಿ ಯೋಜನೆಗಳ ಪೈಕಿ ಅತಿ ದೊಡ್ಡ ಯೋಜನೆಯಾಗಿರುವ ಗೃಹಜ್ಯೋತಿ ಆಗಸ್ಟ್ 1ರಿಂದ ಅನುಷ್ಠಾನಗೊಳ್ಳಲಿದೆ. ನಾಳೆಯಿಂದ ಅರ್ಹ ಗ್ರಾಹಕರಿಗೆ ಶುಲ್ಕ ವಿನಾಯಿತಿ ವಿದ್ಯುತ್ ಬಿಲ್‌ಗಳು ಸಿಗಲಿವೆ.
2 ಕೋಟಿಗೂ ಅಧಿಕ ಫಲಾನುಭವಿಗಳು : ಯೋಜನೆಗೆ ಈಗಾಗಲೇ ನೋಂದಣಿ ಪ್ರಕ್ರಿಯೆಗಳು ಬಿರುಸಿನಿಂದ ನಡೆದಿದ್ದು, ರಾಜ್ಯಾದ್ಯಂತ 1.40 ಕೋಟಿಗೂ ಹೆಚ್ಚು ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಮತ್ತು ಅಮೃತ ಯೋಜನೆಯಡಿ 40 ಲಕ್ಷ ಫಲಾನುಭವಿಗಳು ಯೋಜನೆಯ ವ್ಯಾಪ್ತಿಗೊಳಪಡುತ್ತಿದ್ದಾರೆ. ರಾಜ್ಯದಲ್ಲಿ 2.16 ಕೋಟಿ ಫಲಾನುಭವಿಗಳಿದ್ದು, ಅವರಲ್ಲಿ 2.14 ಕೋಟಿ ಗ್ರಾಹಕರು ಗೃಹಜ್ಯೋತಿಗೆ ಅರ್ಹತೆ ಪಡೆದಿದ್ದರು. ಇದುವರೆಗೆ ಶೇ.66ರಷ್ಟು ಫಲಾನುಭವಿಗಳು ನೋಂದಣಿಯಾಗಿರುವುದರಿಂದ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಂತಾಗಿದೆ. ಸುಮಾರು 2 ಕೋಟಿಗೂ ಮೇಲ್ಪಟ್ಟು ನೋಂದಣಿಗಳಾಗುವ ನಿರೀಕ್ಷೆಗಳಿತ್ತು. ಆದರೆ ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ನೋಂದಣಿಯಲ್ಲಿ ಹಿನ್ನಡೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
1.40 ಕೋಟಿ ಮಂದಿ ನೋಂದಣಿ : ವಿದ್ಯುತ್ ಹೆಸರಿನ ಗೊಂದಲ, ಆಧಾರ್ ಕಾರ್ಡ್‌ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ಸಮಸ್ಯೆಗಳ ಗೊಂದಲದಿಂದ ಬಹಳಷ್ಟು ಮಂದಿ ನೋಂದಣಿ ಪ್ರಕ್ರಿಯೆಯಿಂದ ಹಿಂದುಳಿದಿದ್ದಾರೆ. ಆಗಸ್ಟ್ ತಿಂಗಳ ಸೌಲಭ್ಯ ಪಡೆಯಬೇಕಾದರೆ ಜುಲೈ 27ರ ಒಳಗೆ ನೋಂದಣಿಯಾಗಬೇಕಿತ್ತು. ಅದರ ಪ್ರಕಾರ, ಈವರೆಗೂ 1.40 ಕೋಟಿಯಷ್ಟು ಮಂದಿ ನೋಂದಣಿಯಾಗಿದ್ದಾರೆ. ನೋಂದಣಿ ಪ್ರಕ್ರಿಯೆ ಮುಂದುವರಿದಿದ್ದು, ಆಗಸ್ಟ್ನಲ್ಲಿ ಮತ್ತಷ್ಟು ಗ್ರಾಹಕರು ಅರ್ಜಿ ಸಲ್ಲಿಸುವ ನಿರೀಕ್ಷೆಗಳಿವೆ.
ರಾಜ್ಯ ಸರ್ಕಾರ ಈ ಮೊದಲು ನಿಗದಿಪಡಿಸಿದ ಮಾನದಂಡದ ಪ್ರಕಾರ ತಿಂಗಳಿಗೆ 200 ಯುನಿಟ್ ಒಳಗೆ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಬಳಕೆಗೆ ಅನುಮತಿಸಿ ಯೋಜನೆ ಜಾರಿ ಮಾಡಲಾಗುತ್ತಿದೆ. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಯಡಿ 40 ಯುನಿಟ್ ವಿದ್ಯುತ್ ಬಳಕೆಗೆ ಅನುಮತಿಸಲಾಗಿತ್ತು. ಅವರಿಗೆ ರಾಜ್ಯದ ಸರಾಸರಿ ಬಳಕೆಯ 53 ಯುನಿಟ್‌ವರೆಗೆ ವಿದ್ಯುತ್ ಬಳಸಲು ಅವಕಾಶ ನೀಡಲಾಗಿದೆ. ಅಮೃತ ಯೋಜನೆಯಡಿ ಎಸ್ಸಿ, ಎಸ್‌ಟಿ ಫಲಾನುಭವಿಗಳಿಗೆ 75 ಯುನಿಟ್‌ವರೆಗೂ ವಿದ್ಯುತ್ ಬಳಸಲು ಅವಕಾಶವಿತ್ತು. ಅವರಿಗೆ ಶೇ.10ರಷ್ಟು ಹೆಚ್ಚುವರಿಯಾಗಿ ಒಟ್ಟು 82.50 ಯುನಿಟ್ ಬಳಸಲು ಅನುಮತಿ ನೀಡಲಾಗಿದೆ.
''ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಯನ್ನು ಆಗಸ್ಟ್ 5ರಂದು ಕಲಬುರಗಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಸಲಾಗುವುದು " ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಜುಲೈ 1 ರಿಂದ ಬಳಸಿದ ವಿದ್ಯುತ್‌ಗೆ ಗೃಹಜ್ಯೋತಿ ಯೋಜನೆಯಡಿ ಶುಲ್ಕ ವಿನಾಯಿತಿ ನೀಡಲಾಗುತ್ತದೆ. ಗೃಹಜ್ಯೋತಿ ಯೋಜನೆಯಡಿ ಈವರೆಗೂ 1.40 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಜುಲೈ 1 ರಿಂದ 15 ರವರೆಗೆ ಬಳಸಿದ ವಿದ್ಯುತ್ ಸೇರಿ ಬಿಲ್ ನೀಡಿರುವುದರಿಂದ ಗ್ರಾಹಕರು ಹಣ ಪಾವತಿ ಮಾಡಿದ್ದಾರೆ. ಈ ಯೋಜನೆ ಜುಲೈ 1 ರಿಂದ ಜಾರಿಯಾಗುವುದರಿಂದ ಗ್ರಾಹಕರು ಪಾವತಿಸಿದ 15 ದಿನಗಳ ಶುಲ್ಕವನ್ನು ಮರು ಪಾವತಿಸಲಾಗುವುದು" ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ : Gruha Jyoti scheme: 20 ಲಕ್ಷ ದಾಟಿದ ಗೃಹ ಜ್ಯೋತಿ ನೋಂದಣಿ.. ಹೆಸ್ಕಾಂ ಇಲಾಖೆ ದಾಖಲೆ