ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಗಳೂರಿನ ಸಮಾನ ಮನಸ್ಕ ವಕೀಲರ ವೇದಿಕೆ ಬೆಂಬಲ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ವೇದಿಕೆಯ ವಕೀಲರು ನಾಳೆ ಮಧ್ಯಾಹ್ನ 3.30 ಗಂಟೆಗೆ ಸಿಟಿ ಸಿವಿಲ್ ಕೋರ್ಟ್ ಆವರಣದಿಂದ ಹೈಕೋರ್ಟ್ವರೆಗೆ ವಕೀಲರ ನಡಿಗೆ - ರೈತರ ಕಡೆಗೆ ಹೆಸರಲ್ಲಿ ಮೆರವಣಿಗೆ ಹಾಗೂ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಮಾನ ಮನಸ್ಕ ವಕೀಲರ ವೇದಿಕೆ ಹಮ್ಮಿಕೊಂಡಿರುವ ಈ ಮೆರವಣಿಗೆಯಲ್ಲಿ ನಗರದ ಇತರೆ ವಕೀಲರು ಭಾಗವಹಿಸಿ ರೈತರಿಗೆ ಬೆಂಬಲ ಸೂಚಿಸಬೇಕೆಂದು ಕೋರಲಾಗಿದೆ.
ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ: ಕೋಟಿ ಚೆನ್ನಯ್ಯರ ಗರಡಿಯಲ್ಲಿ ಜಗದೀಶ್ ಅಧಿಕಾರಿ ಕ್ಷಮೆಯಾಚನೆ !
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್ ಈ ಕಾರ್ಯಕ್ರಮದ ಮುಖ್ಯಸ್ಥಿಕೆ ವಹಿಸಿದ್ದು ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆಗಳ ವಿರುದ್ಧ ಐತಿಹಾಸಿಕ ಪ್ರತಿಭಟನೆ ನಡೆಸುತ್ತಿದ್ದಾರೆ. ಕೋವಿಡ್ನಿಂದ ದೇಶದ ಜನ ಕಂಗಾಲಾಗಿರುವ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಚರ್ಚೆ, ವಿಮರ್ಶೆಗೆ ಅವಕಾಶ ನೀಡದೆ, ಸಾರ್ವಜನಿಕರ ವಿರೋಧವನ್ನೂ ಲೆಕ್ಕಿಸದೇ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿವೆ. ಇವುಗಳನ್ನು ವಿರೋಧಿಸಿ ಅನ್ನದಾತರು ಪ್ರತಿಭಟಿಸುತ್ತಿದ್ದು, ನಾಳೆ ಜವಾಬ್ದಾರಿಯುತ ವಕೀಲರಾಗಿ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದಿದ್ದಾರೆ.