ಬೆಂಗಳೂರು: ಮದುವೆಗೆ 2 ದಿನ ಮುನ್ನವೇ ಮದುಮಗ ಎಸ್ಕೇಪ್ ಆಗಿದ್ದು, ಘಟನೆಯಿಂದ ಬೇಸತ್ತ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಎರಡು ವರ್ಷದಿಂದ ಸೋಮಶೇಖರ್ ಎಂಬಾತ ಯುವತಿಯನ್ನು ಪ್ರೀತಿಸುತ್ತಿದ್ದ. ಮದುವೆ ಬಗ್ಗೆ ಇಬ್ಬರ ಮನೆಯಲ್ಲೂ ಪ್ರಸ್ತಾಪ ಮಾಡಿ ಒಪ್ಪಿಗೆ ಪಡೆದುಕೊಂಡು ವಿವಾಹವಾಗಲು ಸಿದ್ಧತೆ ನಡೆಸಿದ್ದರು. ಮದುವೆಗೆ ದಿನಾಂಕ ನಿಗದಿ ಮಾಡಿ, ಮನೆ ಮುಂದೆ ಚಪ್ಪರವನ್ನು ಹಾಕಲಾಗಿತ್ತು. ಇನ್ನೇನು ಮದುವೆಗೆ ಎರಡು ದಿನ ಬಾಕಿ ಇರುವಾಗಲೇ ವರ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.
ಕೆಲಸಕ್ಕೆಂದು ಹಾಸನದ ಚೆನ್ನರಾಯಪಟ್ಟಣದಿಂದ ಬೆಂಗಳೂರಿಗೆ ಬಂದ ಸೋಮಶೇಖರ್ಗೆ ನಾಗರಬಾವಿ ಬಳಿಯ ವಿಶ್ವೇಶ್ವರಯ್ಯ ಲೇಔಟ್ನ ಯುವತಿ ಜೊತೆ ಪ್ರೇಮಾಂಕುರವಾಗಿತ್ತು. ಎರಡು ವರ್ಷದಿಂದ ಯುವತಿಯನ್ನ ಲವ್ ಮಾಡುತ್ತಿರುವುದಾಗಿ ನಂಬಿಸಿದ್ದ ಆರೋಪಿ ಕಳೆದ ವರ್ಷ ಮೇ ನಲ್ಲಿ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ ಕೊರೊನಾ ಸಂದರ್ಭದಲ್ಲಿ ಮದುವೆ ಬೇಡ ಎಂದು ಹೇಳಿ, ಮದುವೆ ಮುಂದೂಡಿದ್ದ. ಈ ಬಳಿಕ ಹೊಸ ವಾಹನ ತೆಗೆದುಕೊಳ್ಳಬೇಕು ಅಂತ 8 ಲಕ್ಷ ಹಣ ಪೀಕಿದ್ದಾನೆ. ಕಡೆಗೆ ಮಾ. 24ರಂದು ಮದುವೆ ದಿನಾಂಕ ನಿಗದಿ ಮಾಡಲಾಗಿದೆ. ಆದರೆ ಮದುವೆಗೆ ಎರಡು ದಿನ ಇರುವಾಗಲೇ ನನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿ ಫೋನ್ ಸ್ವಿಚ್ಡ್ ಆಫ್ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ.
ಹೀಗಾಗಿ ಇದೀಗ ನೊಂದ ಯುವತಿ ಹಾಗೂ ಪೊಷಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.