ಬೆಂಗಳೂರು : ಕೊರೊನಾ ಕಾರಣಕ್ಕೆ ಕಲ್ಯಾಣ ಮಂಟಪ ಆರಂಭಿಸಲು ಅವಕಾಶ ಇರಲಿಲ್ಲ. ಇದೀಗ ನಾಳೆಯಿಂದ ಕಲ್ಯಾಣ ಮಂಟಪ ಆರಂಭಕ್ಕೂ ಅವಕಾಶ ನೀಡಿದೆ. ಆಯಾ ಝೋನಲ್ ಅಧಿಕಾರಿಗಳ ಅನುಮತಿ ಪಡೆಯಬೇಕು. ಹಾಗೆಯೇ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಜನರ ಪಟ್ಟಿ ನೀಡಬೇಕು. ಮಾರ್ಗಸೂಚಿ ಕಾಪಾಡಲು ಮಾರ್ಷಲ್ಗಳನ್ನು ಸಹ ನೇಮಕ ಮಾಡಲಾಗುತ್ತೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೇಳಿದರು.
ರಾಜ್ಯ ಸರ್ಕಾರವು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಪ್ರತಿ ವರ್ಷ ಜೂನ್ 27ರಂದು ಆಚರಿಸುತ್ತಿದೆ. ಅದರಂತೆ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿಯನ್ನ ಕೋವಿಡ್ ಹಿನ್ನೆಲೆ ಸರಳವಾಗಿ ಬಿಬಿಎಂಪಿಯ ಕೇಂದ್ರ ಕಚೇರಿಯ ಮುಂಭಾಗ ಕೆಂಪೇಗೌಡರ ಪ್ರತಿಮೆ ಹಾಗೂ ಅವರ ಸೊಸೆ ಮಹಾತ್ಯಾಗಿ ಲಕ್ಷ್ಮಿದೇವಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.
ಬಳಿಕ ಮಾತಾನಾಡಿದ ಆಯುಕ್ತ ಗೌರವ್ ಗುಪ್ತ, ಕೊರೊನಾ ಕಾರಣಕ್ಕೆ ಸರ್ಕಾರದ ಆದೇಶದಂತೆ ಸರಳವಾಗಿ ಜಯಂತಿಯನ್ನ ಆಚರಿಸಲಾಗಿದೆ. ಮೂರನೇ ಅಲೆ ಸಲುವಾಗಿ ಬೆಂಗಳೂರಿನಲ್ಲಿ ಲಸಿಕೆ ನೀಡಲಾಗ್ತಿದೆ. ಈ ದಿಕ್ಕಿನಲ್ಲಿ ಕಳೆದೆರಡು ದಿನಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ ಎಂದು ಹೇಳಿದರು.
ಜುಲೈ ತಿಂಗಳಲ್ಲಿ ಶೇ.70ರಷ್ಟು ವಯಸ್ಕರಿಗೆ ಲಸಿಕೆ ಹಾಕಲಾಗುತ್ತದೆ. ಡೆಲ್ಟಾ, ಡೆಲ್ಟಾ ಪ್ಲಸ್ ನಂತಹ ಯಾವುದೇ ರೂಪಾಂತರಿ ಬಂದರು, ಲಸಿಕೆಯೊಂದೇ ಪರಿಹಾರ. ಮುಂದಿನ ದಿನಗಳಲ್ಲಿ ಡೋರ್ ಟು ಡೋರ್ ಲಸಿಕಾ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ. ಅದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರವಲ್ಲದೇ ಕೆಲಸದ ಜಾಗದಲ್ಲೂ ವ್ಯಾಕ್ಸಿನೇಷನ್ ಕ್ಯಾಂಪ್ ಮಾಡಲಾಗುತ್ತಿದೆ. ಲಸಿಕೆ ಲಭ್ಯತೆ ಆಧಾರದಲ್ಲಿ ಇನ್ನಷ್ಟು ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು. ಕೊರೊನಾ ನಿಯಂತ್ರಣಕ್ಕಾಗಿ ವೀಕೆಂಡ್ ಕರ್ಫ್ಯೂ ಇದ್ದರೂ, ವಾಸ್ತವದಲ್ಲಿ ಜನರ ಓಡಾಟ ಸಾಮಾನ್ಯ ದಿನದಂತೆ ಇದೆ. ಜನರು ಕೊರೊನಾ ಮಾರ್ಗಸೂಚಿಯನ್ನ ಪಾಲಿಸಬೇಕು ಎಂದರು.