ಬೆಂಗಳೂರು: ತಮ್ಮ ಜೀವಿತಾವಧಿ ಪಿಂಚಣಿಯನ್ನು ಕೋವಿಡ್-19 ಪರಿಹಾರ ನಿಧಿಗೆ ನಿವೃತ್ತ ಶಿಕ್ಷಕಿಯೊಬ್ಬರು ದೇಣಿಗೆ ನೀಡಿದ್ದು, ಅವರ ಮಗ ಬಡ್ಡಿ ಇಲ್ಲದೇ ಬಡವರಿಗೆ ಸಾಲ ನೀಡಲು ಮುಂದಾಗಿದ್ದಾರೆ. ತಾಯಿ-ಮಗನ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇಲ್ಲಿನ ಯಲಹಂಕ ಉಪನಗರದ ಅಟ್ಟೂರು ಬಡಾವಣೆ ನಿವಾಸಿ ಡಿ.ವಿ.ಸಾವಿತ್ರಿದೇವಿ ತಮಗೆ ಬರುತ್ತಿದ್ದ ಮಾಸಿಕ 41 ಸಾವಿರ ರೂಪಾಯಿಗಳನ್ನು ಸರ್ಕಾರಕ್ಕೆ ನೀಡುವುದರ ಜೊತೆಗೆ ಮುಂದಿನ ಜೀವಿತಾವಧಿ ಪಿಂಚಣಿಯನ್ನು ಸಿಎಂ ಬಿಎಸ್ವೈ ಪರಿಹಾರ ನಿಧಿಗೆ ಬರೆದು ಕೊಟ್ಟಿದ್ದಾರೆ.
ಇವರು ಅಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಕಳೆದ 5 ವರ್ಷಗಳ ಹಿಂದೆ ನಿವೃತ್ತಿಯಾಗಿತ್ತು. ಲಾಕ್ಡೌನ್ನಿಂದಾಗಿ ಬದುಕು ಕಳೆದುಕೊಂಡ, ಹೊತ್ತಿನ ಗಂಜಿಗೂ ಪರದಾಡುತ್ತಿರುವ ನಿರ್ಗತಿಕರ, ಬಡವರ ನೆರವಿಗಾಗಿ ತಮ್ಮ ಸಂಪೂರ್ಣ ಪಿಂಚಣಿಯನ್ನು ನೀಡಿ ಮಾದರಿಯಾಗಿದ್ದಾರೆ.
ಅಮ್ಮನಂತೆ ಮಗ: ನಿವೃತ್ತ ಶಿಕ್ಷಕಿ ಸಾವಿತ್ರಿದೇವಿ ಅವರ ಮಗ ಕೂಡ ಬಡವರ ನೆರವಿಗೆ ಮುಂದಾಗಿದ್ದು, ಬಡ್ಡಿ ರಹಿತ ಸಾಲ ನೀಡುತ್ತಿದ್ದಾರೆ. ಮಗ ಎಂ.ಎಸ್.ಬಾಲಾಜಿ ಉದ್ಯಮಿಯಾಗಿದ್ದು, ಅರ್ಚನಾ ಕಾರ್ಪೋರೇಟ್, ಕಮ್ಯುನಿಕೇಷನ್ ಕಂಪನಿಯ ಮಾಲೀಕರಾಗಿದ್ದಾರೆ.
ಸುಮಾರು 82 ಜನರಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದಾರೆ. ಹರಿಯಾಣ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಜನರಿಗೂ ಹಣಕಾಸಿನ ನೆರವು ನೀಡಿದ್ದಾರೆ. ಗುರುತು ಪರಿಚಯವಿಲ್ಲದ ವ್ಯಕ್ತಿಗಳಿಗೂ ಸಹಾಯ ಮಾಡುತ್ತಿದ್ದು, ಲಾಕ್ಡೌನ್ ಮುಗಿಯುವವರೆಗೂ ಕೈಲಾದಷ್ಟು ನೆರವು ನೀಡುತ್ತೇನೆ ಎಂದು ಬಾಲಾಜಿ ದೂರವಾಣಿ ಮೂಲಕ ‘ಈಟಿವಿ ಭಾರತ’ಕ್ಕೆ ತಿಳಿಸಿದರು.