ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಂಚೆ ಮತದಾನ ಸಂಬಂಧ ವೇತನ ಸಹಿತ ರಜೆ ನೀಡಲು ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳ ಇಲಾಖೆಗಳೆಂದು ಅಧಿಸೂಚಿಸಿದ ಪಟ್ಟಿಯನ್ನು ಆಧರಿಸಿ ಭಾರತ ಚುನಾವಣಾ ಆಯೋಗವು ಅಗತ್ಯ ಸೇವೆಗಳ ಇಲಾಖೆ ಎಂದು ಗುರುತಿಸಲಾದ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಅಂಚೆ ಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಗೈರು ಹಾಜರಿಯು ಮತದಾರರಿಗೆ ಪೋಸ್ಟಲ್ ವೋಟಿಂಗ್ ಸೆಂಟರ್ (PVC)ನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಮಾದರಿಯಾಗಿ ಮೇ 2 ರಿಂದ ಮೇ 4 ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆಯಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ಹಾಗೂ ಅಗತ್ಯ ಸೇವೆಗಳ ಇಲಾಖೆಗಳು ಬರುವ ಅಧಿಕಾರಿ / ಸಿಬ್ಬಂದಿ ಮತದಾನ ಮಾಡಲು ಅನುಕೂಲವಾಗುವಂತೆ ಮತದಾನ ಮಾಡಲು ತೆರಳಿದ ದಿನದಂದು ವೇತನ ಸಹಿತ ರಜೆ ನೀಡುವಂತೆ ಚುನಾವಣಾ ಆಯೋಗ ಕೋರಿತ್ತು.
ಈ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಅಧಿಕಾರಿ / ಸಿಬ್ಬಂದಿಗೆ ಅಂಚೆ ಮತದಾನಕ್ಕಾಗಿ ಆಯ್ಕೆಮಾಡಿಕೊಂಡ ಅರ್ಹ ಮತದಾರರಿಗೆ ಮತದಾನ ಮಾಡಲು ಅನುವಾಗುವಂತೆ ಮೇ 2 ರಿಂದ ಮೇ 4 ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಮಾಡಲು ತೆರಳಿದ ದಿನಾಂಕದಂದು ಮಾತ್ರ ವೇತನ ಸಹಿತ ರಜೆಗೆ ಅರ್ಹರಿರುತ್ತಾರೆ ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ.
ಅಗತ್ಯ ಸೇವೆ ಇಲಾಖೆಗಳು: ವಿದ್ಯುತ್ ಇಲಾಖೆ, ಬಿಎಸ್ಎನ್ಎಲ್, ರೈಲ್ವೇಸ್, ದೂರದರ್ಶನ, ಆಲ್ ಇಂಡಿಯಾ ರೆಡಿಯೋ, ಆರೋಗ್ಯ ಇಲಾಖೆ, ವಿಮಾನಯಾನ, ರಸ್ತೆ ಸಾರಿಗೆ ಸಂಸ್ಥೆಗಳು, ಅಗ್ನಿಶಾಮಕ, ಚುನಾವಣಾ ಆಯೋಗದ ಮಾನ್ಯತೆ ಪಡೆದ ಪತ್ರಕರ್ತರು, ಟ್ರಾಫಿಕ್ ಪೊಲೀಸ್, ಆ್ಯಂಬುಲೆನ್ಸ್ ಸೇವಾ ಸಿಬ್ಬಂದಿ, ಅಧಿಕಾರಿಗಳಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ನಾಳೆ ರಾಜ್ಯ ರಾಜಧಾನಿಯಲ್ಲಿ ಪ್ರಧಾನಿ ಮೆಗಾ ರೋಡ್ ಶೋ: ಅಹಿತಕರ ಘಟನೆ ನಡೆಯದಂತೆ ಖಾಕಿ ಕಟ್ಟೆಚ್ಚರ