ಬೆಂಗಳೂರು: ವಿಶ್ವನಾಥನ್ ಆನಂದ ಅವರನ್ನು ಸೋಲಿಸುವ ಪ್ರಯತ್ನದಲ್ಲಿ ಕೊಂಚದರಲ್ಲಿಯೇ ವಿಫಲವಾಗಿ ಡ್ರಾನಲ್ಲಿ ಅಂತ್ಯಗೊಂಡು, ಇತಿಹಾಸದ ಪುಟ ಸೇರಿದ 15ರ ಪೋರ ಈಗ ಬೆಂಗಳೂರಿನ ಕಂಪನಿಯೊಂದಕ್ಕೆ ರಾಯಭಾರಿಯಾಗಿದ್ದಾರೆ. ಈ ಲಿಟಲ್ ಚಾಂಪ್ ಜತೆ ಈಟಿವಿ ಭಾರತ್ ಚಿಟ್ಚಾಟ್ ನಡೆಸಿದ್ದು, ಅವನು ತನ್ನ ಮನದ ಮಾತು ಬಿಚ್ಚಿಟ್ಟಿದ್ದಾನೆ.
ವಿಶ್ವಚಾಂಪಿಯನ್ ಆಗುವ ಮಹದಾಸೆ ಹೊತ್ತುಕೊಂಡಿರುವ ಕೇರಳ ಮೂಲದ ಈ ಪ್ರತಿಭೆ ನಿಹಲ್ ಸರಿನ್ ಅತಿ ಕಿರಿಯ ವಯಸ್ಸಿಗೆ, ಬೆಂಗಳೂರಿನ ಅಕ್ಷಯಕಲ್ಪ ಹಾಲು ಕಂಪನಿಗೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾನೆ.
ನಿಹಲ್ ಸರಿನ್ 2004ರಲ್ಲಿ ಜನಿಸಿದ್ದು, ವಿಶ್ವ ಚೆಸ್ ಶ್ರೇಯಾಂಕದಲ್ಲಿ 2610ನೇ ಸ್ಥಾನದಲ್ಲಿದ್ದು, ಭಾರತದ 53ನೇ ಗ್ರಾಂಡ್ ಮಾಸ್ಟರ್ ಆಗಿದ್ದಾರೆ. ನಿಹಾಲ್ನ ಮುಖ ಬೆಲೆ ಸದ್ಯ ಒಂದು ಮಿಲಿಯನ್ ಯುಎಸ್ ಡಾಲರ್ ನಷ್ಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಟೂರ್ನಿಗಳಲ್ಲಿ ಭಾಗವಹಿಸುವ ನಿಹಾಲ್ ಮತ್ತಷ್ಟು ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂಬ ವಿಶ್ವಾಸದಿಂದ ಅಕ್ಷಯಕಲ್ಪ ಎಂಬ ಹಾಲು ಉತ್ಪಾದಕ ಕಂಪನಿಗಳು ತಮ್ಮ ಉತ್ಪನ್ನಗಳ ರಾಯಭಾರಿಯನ್ನಾಗಿ ಮಾಡಿಕೊಂಡಿದೆ. ವಿಶ್ವದ ನಾನಾ ಭಾಗಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದು ಬೀಗುತ್ತಿರುವ ನಿಹಾಲ್ ಭಾರತದ ಗ್ರಾಂಡ್ ಮಾಸ್ಟರ್ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾನೆ.
ನನ್ನ ಅಜ್ಜನಿಂದ ಕಲಿತ ಆಟ ಈಗ ಇಡಿ ವಿಶ್ವದಲ್ಲೆಡೆ ಪ್ರಶಂಸೆಗೆ ಪಾತ್ರವಾಗುವಂತೆ ಮಾಡಿದೆ. ಮುಂದೊಂದು ದಿನ ಚೆಸ್ನಲ್ಲಿ ವಿಶ್ವಚಾಂಪಿಯನ್ ಪಟ್ಟ ಮುಡಿಗೇರಿಕೊಳ್ಳುತ್ತೇನೆ ಎಂದು ನಿಹಾಲ್ ಸರಿನ್ ಭರವಸೆ ಮೂಡಿಸಿದ್ದಾನೆ.