ಬೆಂಗಳೂರು: ತಾಲೂಕು ಪಂಚಾಯಿತಿಗಳಿಗೆ ಜನಸಂಖ್ಯೆ ಆಧಾರದಲ್ಲಿ ಕನಿಷ್ಠ ಮತ್ತು ಗರಿಷ್ಠ ಸದಸ್ಯರ ಆಯ್ಕೆ ಮಾಡಲು, ಸರ್ಕಾರಿ ನೌಕರಿಯಿಂದ ವಜಾಗೊಂಡಿರುವ ನೌಕರರಿಗೆ ಪಂಚಾಯಿತಿ ಚುನಾವಣೆಗಳಲ್ಲಿ ನಿಷೇಧ ಹೇರುವ ಸಲುವಾಗಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2022 ವಿಧಾನಸಭೆಯಲ್ಲಿ ಅಂಗೀಕೃತಗೊಂಡಿತು.
ಈ ಹಿಂದೆ ತಾಲೂಕು ಪಂಚಾಯಿತಿಗಳಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ, ಕನಿಷ್ಠ 11 ಸದಸ್ಯರನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಜನಸಂಖ್ಯೆ ಕಡಿಮೆ ಇದ್ದರೂ, ಹೆಚ್ಚಿನ ಸದಸ್ಯರನ್ನು ಹೊಂದಿರುವುದರಿಂದ ಸರ್ಕಾರಕ್ಕೆ ಅನಗತ್ಯ ಖರ್ಚು ಜೊತೆಗೆ ಸುಲಭ ಆಡಳಿತ ನಡೆಸಲೂ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ತಿದ್ದುಪಡಿ ಮಾಡಲಾಗಿದೆ.
ಈಗಿರುವ ಕಾನೂನಿನಲ್ಲಿ 12,500 ರಿಂದ 15,000 ಜನಸಂಖ್ಯೆಗೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಈ ಆಯ್ಕೆ ಪದ್ದತಿಯು ಸ್ಪಷ್ಟವಾಗಿಲ್ಲ ಎಂದು ರಾಜ್ಯ ಚುನಾವಣಾ ಆಯೋಗವು ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಲ್ಲದೇ, ರಾಜ್ಯ ಸರ್ಕಾರ ನೇಮಿಸಿರುವ ಸೀಮಾ ನಿರ್ಣಯ ಆಯೋಗವೂ ಈಗಿರುವ ಕಾನೂನು ತಿದ್ದುಪಡಿ ಮಾಡುವಂತೆ ಸಲಹೆ ನೀಡಿರುವುದರಿಂದ ಸರ್ಕಾರ ಈ ತಿದ್ದುಪಡಿ ಮಾಡಿದೆ.
ತಿದ್ದುಪಡಿ ಏಕೆ?: ತಾಲೂಕಿನ ಜನಸಂಖ್ಯೆಯು 2 ಲಕ್ಷಕ್ಕಿಂತ ಹೆಚ್ಚಿದ್ದರೆ, ಕನಿಷ್ಠ 12 ಸಾವಿರ ಜನಸಂಖ್ಯೆಗೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಲು ಈ ತಿದ್ದುಪಡಿ ತರಲಾಗುತ್ತಿದೆ. ತಾಲೂಕಿನ ಜನ ಸಂಖ್ಯೆಯು 1 ಲಕ್ಷಕ್ಕಿಂತ ಹೆಚ್ಚು ಹಾಗೂ 2 ಲಕ್ಷಕ್ಕಿಂತ ಕಡಿಮೆ ಇದ್ದರೆ, ಅಂತಹ ತಾಲೂಕು ಪಂಚಾಯಿತಿಗಳಿಗೆ ಕನಿಷ್ಠ 10 ಸಾವಿರ ಜನ ಸಂಖ್ಯೆಗೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ತಾಲೂಕು ಪಂಚಾಯಿತಿಗಳಲ್ಲಿ ಕನಿಷ್ಠ 11 ಮಂದಿ ಸದಸ್ಯರಿರುವಂತೆ ನೋಡಿಕೊಳ್ಳಲು ತಿದ್ದುಪಡಿ ಮಾಡಲಾಗುತ್ತಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆ.. ತಮಿಳುನಾಡು ನಿರ್ಣಯ ಖಂಡಿಸಿ ಸದನದಲ್ಲಿ ಸರ್ವಾನುಮತದ ನಿರ್ಣಯ
ಇನ್ನು ಒಂದು ತಾಲೂಕು ಪಂಚಾಯಿತಿಯ ಜನಸಂಖ್ಯೆ 50 ಸಾವಿರದಿಂದ 1 ಲಕ್ಷದೊಳಗೆ ಇದ್ದರೆ. ಅಲ್ಲಿ ಕನಿಷ್ಟ 9 ಜನ ಸದಸ್ಯರನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ತಾಲೂಕಿನ ಗ್ರಾಮೀಣ ಜನಸಂಖ್ಯೆ ಕನಿಷ್ಠ 50 ಸಾವಿರಕ್ಕಿಂತ ಕಡಿಮೆ ಇದ್ದಲ್ಲಿ, ಅಂತಹ ತಾಲೂಕು ಪಂಚಾಯಿತಿಗಳಿಗೆ ಕನಿಷ್ಠ 7 ಜನ ಸದಸ್ಯರನ್ನು ಆಯ್ಕೆ ಮಾಡಲು ತಿದ್ದುಪಡಿ ತರಲಾಗುತ್ತಿದೆ.
ಪ್ರಮುಖವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವಾಗ ನೌಕರಿಯಿಂದ ವಜಾಗೊಂಡಿರುವ, ಕಡ್ಡಾಯ ನಿವೃತ್ತಿಗೊಳಪಟ್ಟವರು ಹಾಗೂ ಸೇವೆಯಿಂದ ತೆಗೆದು ಹಾಕಿರುವ ಸರ್ಕಾರಿ ನೌಕರರನ್ನು ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸದಿರಲು ಕಾನೂನಿಗೆ ತಿದ್ದುಪಡಿ ತರಲಾಗಿದೆ.