ಬೆಂಗಳೂರು: ಕೊರೊನಾ ಆರ್ಭಟದ ನಡುವೆಯೂ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಯಶಸ್ವಿಯಾಗಿ ಮುಗಿದಿದ್ದು, ಇಂದು ಮತ ಎಣಿಕೆ ನಡೆಯಲಿದೆ. ಈ ಮೂಲಕ ಎರಡು ಹಂತದ ಒಟ್ಟು 2,22,814 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಮೊದಲ ಮತ್ತು ಎರಡನೇ ಹಂತದಲ್ಲಿ 226 ತಾಲೂಕುಗಳ 5,728 ಗ್ರಾಮ ಪಂಚಾಯತ್ಗಳ 82,616 ಸ್ಥಾನಗಳಿಗೆ ನಡೆದ ಚುನಾವಣೆ ನಡೆದಿತ್ತು. ಎರಡೂ ಹಂತದಲ್ಲಿ ಒಟ್ಟು 8,074 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.
ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ:
ಆಯಾ ತಾಲೂಕುಗಳಲ್ಲಿ ನಿಗದಿಪಡಿಸಿರುವ ಮತ ಎಣಿಕೆ ಕೇಂದ್ರದಲ್ಲಿ ಮತ ಪೆಟ್ಟಿಗೆಗಳನ್ನಿಡಲಾಗಿದೆ. ಮತ ಪೆಟ್ಟಿಗೆ ಇಟ್ಟಿರುವ ಸ್ಥಳಗಳಿಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಎರಡೂ ಹಂತದ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.
ಮೊದಲ ಹಂತದಲ್ಲಿ 3,019 ಗ್ರಾಮ ಪಂಚಾಯತ್ಗಳ 48,048 ಒಟ್ಟು ಸ್ಥಾನಗಳಿತ್ತು. ಈ ಪೈಕಿ 43,238 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಮೊದಲ ಹಂತದಲ್ಲಿ 4,377 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಂತಿಮವಾಗಿ 1,17,383 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಡಿ.27 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ. 80.71ರಷ್ಟು ಮತದಾನವಾಗಿದ್ದು, ಎರಡನೇ ಹಂತದಲ್ಲಿ ರಾಜ್ಯದ 109 ತಾಲೂಕುಗಳ 2,709 ಗ್ರಾಮ ಪಂಚಾಯತ್ಗಳ 39,378 ಸ್ಥಾನಗಳಿಗೆ ಸ್ಪರ್ಧಿಸಿದ್ದ 1,05,431 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆದಿದ್ದು, ಇಂದು ಸಂಜೆ ವೇಳೆಗೆ ಪೂರ್ಣ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.