ಬೆಂಗಳೂರು: ಪಾದರಾಯನಪುರ ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ಗೆ ಕಳುಹಿಸಲು ಮುಂದಾಗಿದ್ದ ಪೊಲೀಸರು, ವೈದ್ಯಕೀಯ, ಬಿಬಿಎಂಪಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ. ಇದು ಸಣ್ಣ ಘಟನೆಯಲ್ಲ, ಗಂಭೀರ ಘಟನೆ. ದುಷ್ಕರ್ಮಿಗಳ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗಲಭೆಯ ತನಿಖೆ ನಡೆಯುತ್ತಿದ್ದು, ಗಲಭೆ ಹಿಂದಿನ ಕಾಣದ ಕೈಗಳ ಹುಡುಕಾಟ ಮಾಡ್ತಿದೀವಿ. ಇದರ ಹಿಂದೆ ಇದ್ದವರು ಎಷ್ಟೇ ಪ್ರಭಾವಿಗಳಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲಾ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಾಪೂಜಿನಗರ, ಪಾದರಾಯನಪುರ, ಟಿಪ್ಪು ನಗರಗಳಲ್ಲಿ ವಿಶೇಷ ಬಂದೋಬಸ್ತ್, ಹೆಚ್ಚುವರಿ ಪೊಲೀಸ್ ಫೋರ್ಸ್ ತಂದು ಬಿಗಿ ಭದ್ರತೆ ಕೈಗೊಳ್ತೇವೆ. ಈಗಾಗಲೇ ಕ್ವಾರಂಟೈನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. 5 ಜನರ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ ಗೃಹ ಸಚಿವರು ಮಾಹಿತಿ ನೀಡಿದರು.