ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಸರ್ಕಾರ ಹಂತ-ಹಂತವಾಗಿ ಎಲ್ಲಾ ಶಾಲೆಗಳ ಭೌತಿಕ ತರಗತಿಗಳನ್ನು ಪುನಾರಂಭಿಸಿದೆ. ಇದೀಗ ನ.08 ರಿಂದ ಎಲ್ಲಾ ಎಲ್ಕೆಜಿ, ಯುಕೆಜಿ, ಅಂಗನವಾಡಿ ಕೇಂದ್ರಗಳನ್ನು ಸಹ ಪುನಾರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಈ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚು ದಿನಗಳಿಂದ ಅಂಗನವಾಡಿ ಕೇಂದ್ರಗಳು ಬಂದ್ ಆಗಿದ್ದು, ನ.08ರಿಂದ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಮಾರ್ಗಸೂಚಿಯಲ್ಲಿ ಏನಿದೆ :
- ಕೋವಿಡ್ ಮಾರ್ಗಸೂಚಿಗಳ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಎಲ್ಕೆಜಿ, ಯುಕೆಜಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳನ್ನು ಆರಂಭಿಸಬೇಕು.
- ಮೊದಲ ಹಂತದಲ್ಲಿ ಬೆಳಗ್ಗೆ 10 ರಿಂದ 12 ರವರೆಗೆ ಮಾತ್ರ ನಡೆಸಬೇಕು. ಕೇಂದ್ರದ ಆರಂಭಕ್ಕೂ ಮುನ್ನ ಸ್ಥಳೀಯ ಗ್ರಾಮ ಪಂಚಾಯತ್ ಗಮನಕ್ಕೆ ತರಬೇಕು.
- ಮಕ್ಕಳ ಹಾಜರಾತಿಗೆ ಪೋಷಕರ ಅನುಮತಿ ಪತ್ರ ಪಡೆಯಬೇಕು.
- ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿ ಹಾಗೂ ಕೇಂದ್ರಕ್ಕೆ ಬರುವ ಮಕ್ಕಳ ಪೋಷಕರು ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು.
- ಅಂಗನವಾಡಿಗೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಬೇಕು.
- ಯುಕೆಜಿ, ಎಲ್ಕೆಜಿ, ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು ಹಾಗೂ ಪುಟ್ಟ ಮಕ್ಕಳ ಕೈಗೆ ಸಿಗದಂತೆ ಸಿಬ್ಬಂದಿ ಎಚ್ಚರ ವಹಿಸಬೇಕು.
- ಕೈ ತೊಳೆಯಲು ಸೋಪ್ ವ್ಯವಸ್ಥೆ ಮಾಡಬೇಕು.
- ಮಕ್ಕಳನ್ನು ಕನಿಷ್ಠ ಒಂದು ಮೀಟರ್ ಅಂತರದಲ್ಲಿ ಕೂರಿಸಬೇಕು.
- ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ತಂಡಗಳನ್ನು ರಚಿಸಿ ಒಂದು ತಂಡ ಒಂದು ದಿನ, ಮತ್ತೊಂದು ತಂಡ ಮರುದಿನ ಬರಲು ಸೂಚಿಸಬೇಕು.
- ಮಕ್ಕಳು, ಸಿಬ್ಬಂದಿ ಪ್ರತಿ 30 ನಿಮಿಷಕ್ಕೊಮ್ಮೆ ಕೈತೊಳೆಯಬೇಕು.
- ಅಂಗನವಾಡಿ ಕೇಂದ್ರಗಳಿಗೆ ಸಾರ್ವಜನಿಕರ ಭೇಟಿ ನಿರ್ಬಂಧಿಸಬೇಕು.
- ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೋವಿಡ್ ಲಕ್ಷಣಗಳಿರುವ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದಂತೆ ಪೋಷಕರಿಗೆ ಸೂಚಿಸಬೇಕು.
ಎಲ್ ಕೆಜಿ, ಯುಕೆಜಿ ವೇಳಾಪಟ್ಟಿ : ಸೋಮವಾರದಿಂದ ಶುಕ್ರವಾರದವರೆಗೆ - ಬೆಳಗ್ಗೆ 9-30 ರಿಂದ ಮಧ್ಯಾಹ್ನ 3-30
ಅಂಗನವಾಡಿ : ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ತೆರೆಯುವುದು
15 ದಿನ ಪೌಷ್ಠಿಕ ಆಹಾರ ಮನೆಗೆ :
ಪೂರ್ಣ ಪ್ರಮಾಣದಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯದ ಕಾರಣ ಈಗಿರುವಂತೆಯೇ ಮುಂದಿನ 15 ದಿನಗಳ ಕಾಲ ಕೇಂದ್ರದ ಪ್ರತಿ ಮಗುವಿಗೆ ಪೌಷ್ಠಿಕ ಆಹಾರದ ಧಾನ್ಯಗಳನ್ನು ಮನೆಗೆ ಕಳುಹಿಸಲಾಗುವುದು. ನಂತರ ಪೂರ್ಣ ಪ್ರಮಾಣದಲ್ಲಿ ಅಂಗನವಾಡಿಗಳನ್ನು ಆರಂಭಿಸಿ ಆಯಾ ಕೇಂದ್ರಗಳಲ್ಲೇ ಬಿಸಿಯೂಟ, ಹಾಲು, ಮೊಟ್ಟೆ ಸೇರಿದಂತೆ ಪೌಷ್ಠಿಕ ಆಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಶಾಮನೂರು ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕದ ಪಿಲ್ಲರ್ ಕುಸಿತ; ಮೂವರು ಕಾರ್ಮಿಕರು ದುರ್ಮರಣ