ಬೆಂಗಳೂರು : ಇನ್ನೇನಿದ್ದರೂ ಹಬ್ಬ, ಹರಿದಿನಗಳ ಸೀಸನ್. ಇದರ ಮಧ್ಯೆ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಲೇ ಇವೆ. ಪರಿಸ್ಥಿತಿಯ ಗಂಭೀರತೆ ಅರಿತ ಸರ್ಕಾರ ಗರಿಷ್ಠ ಜನ ಜಮಾವಣೆಯನ್ನು 50ಕ್ಕೆ ಸೀಮಿತಗೊಳಿಸಲು ನಿರ್ಧರಿಸಿದೆ.
ರಾಜ್ಯದಲ್ಲಿ ನಿತ್ಯ 8 ರಿಂದ 9 ಸಾವಿರ ಕೋವಿಡ್ ಪ್ರಕರಣ ಪತ್ತೆಯಾಗುತ್ತಿವೆ. ಅದರಲ್ಲೂ, ಅನ್‌ಲಾಕ್ ಬಳಿಕ ಕೊರೊನಾ ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಸರ್ಕಾರಕ್ಕೆ ಆತಂಕ ತರಿಸಿದೆ. ಇತ್ತ, ಅನ್‌ಲಾಕ್ 0.5ನಲ್ಲಿ ಕೇಂದ್ರ ಸರ್ಕಾರ ನಿಯಮವನ್ನು ಇನ್ನಷ್ಟು ಸಡಿಲಗೊಳಿಸಿ ಮಾರ್ಗಸೂಚಿ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಕೊರೊನಾ ಅಬ್ಬರ ಗಮನಿಸಿ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಮಾವೇಶ, ಮದುವೆ ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗರಿಷ್ಠ 50 ಜನ ಸೇರಲು ಮಾತ್ರ ಅವಕಾಶ ನೀಡಿದೆ.
ಕೋವಿಡ್ ಮಧ್ಯೆ ನಾಡ ಹಬ್ಬ ದಸರಾ ಆಚರಿಸಲು ರಾಜ್ಯದ ಜನರು ಮುಂದಾಗಿದ್ದಾರೆ. ಆದರೆ, ಸರ್ಕಾರ ದಸರಾ ಆಚರಣೆಗೂ ನಿರ್ಬಂಧ ಹೇರಿದೆ. ನವರಾತ್ರಿ ಆಚರಣೆಯನ್ನು ಸರಳವಾಗಿ ಆಚರಿಸುವಂತೆ ಸೂಚನೆ ನೀಡಿದೆ. ಸಾರ್ವಜನಿಕ ನವರಾತ್ರಿ ಹಬ್ಬವನ್ನು 50 ಮಂದಿಗೆ ಮೀರದಂತೆ ಸರಳವಾಗಿ ಆಚರಿಸಲು ಅನುಮತಿಸಲಾಗಿದೆ. ನಾಡಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಜನ ಜಮಾವಣೆ ಇಲ್ಲದೆ ಸರಳವಾಗಿ ಸಾಂಪ್ರದಾಯಿಕ ದಸರಾ ಆಚರಣೆಗೆ ಜಿಲ್ಲಾಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ರಾಜ್ಯ ಸರ್ಕಾರದ ನಿರ್ದೇಶನ ಏನು?: ಕೇಂದ್ರ ಸರ್ಕಾರ ಅನ್‌ಲಾಕ್ 0.5ರ ಮಾರ್ಗಸೂಚಿಯಲ್ಲಿ ಅಕ್ಟೋಬರ್ 15ರ ಬಳಿಕ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಮಾವೇಶ, ಮದುವೆ ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗರಿಷ್ಠ 200 ಜನ ಮೀರಬಾರದು. ಆದರೆ, ರಾಜ್ಯದ ಪರಿಸ್ಥಿತಿ ಅರಿತಿರುವ ಸರ್ಕಾರ, ಜನರ ಜಮಾವಣೆಯನ್ನು ಗರಿಷ್ಠ 50ಕ್ಕೆ ಸೀಮಿತಗೊಳಿಸಿದೆ. ಹೆಚ್ಚು ಜನ ಸೇರಿದ್ರೆ ಆಯೋಜಕರು ಅಥವಾ ಆ ಸಂಸ್ಥೆಯ ಮಾಲೀಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ.
ಮಾರುಕಟ್ಟೆ, ಮಾಲ್ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ 5ಕ್ಕೂ ಹೆಚ್ಚು ಜನ ಗುಂಪುಗೂಡಿ ನಿಲ್ಲುವಂತಿಲ್ಲ. ಇವರ ನಡುವೆ ಕನಿಷ್ಟ 6 ಅಡಿ ಅಂತರವಿರಬೇಕು. ಇಲ್ಲವಾದ್ರೆ ಆ ಸಂಸ್ಥೆಯ ಮಾಲೀಕರಿಗೆ ದಂಡ ಪ್ರಯೋಗ ಮಾಡಲು ಸೂಚನೆ ನೀಡಿದೆ. ಧಾರ್ಮಿಕ ಸಮಾರಂಭಗಳಲ್ಲಿ ಹೆಚ್ಚಿನ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪಾಲ್ಗೊಳ್ಳುವ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ, ರಾಜ್ಯ ಸರ್ಕಾರ ಈ ಕಠಿಣ ನಿಲುವು ತಳೆದಿದೆ. ಅಧಿಕಾರಿಗಳ ಸಲಹೆ ಮೇರೆಗೆ, ಸಭೆ-ಸಮಾರಂಭಗಳಲ್ಲಿ ಗರಿಷ್ಠ 50ಮಂದಿಗೆ ಸೀಮಿತಗೊಳಿಸುವ ನಿರ್ಧಾರ ಕೈಗೊಂಡಿದೆ.