ಬೆಂಗಳೂರು: ಅಪರೂಪದ ಹಾಗೂ ಅನುವಂಶಿಕ ಕಾಯಿಲೆ ಲೈಸೋಸೋಮಲ್ನಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಕಾರ್ಪಸ್ ನಿಧಿಯಿಂದ 5.95 ಕೋಟಿ ರೂಪಾಯಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಹೈಕೋರ್ಟ್‍ಗೆ ತಿಳಿಸಿದೆ.
ಕಾಯಿಲೆ ನಿಯಂತ್ರಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಹಣ ಬಿಡುಗಡೆ ಮಾಡಬೇಕು ಎಂದು ಕೋರಿ ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ ಸೊಸೈಟಿ ಆಫ್ ಇಂಡಿಯಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯ ಸರ್ಕಾರ ಕಾರ್ಪಸ್ ನಿಧಿಯಿಂದ 5.95 ಕೋಟಿ ರೂಪಾಯಿ ಹಣವನ್ನು ಚಿಕಿತ್ಸೆ ಹಾಗೂ ಔಷಧಿ ಖರೀದಿಗೆ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಅದರಂತೆ ಹಣ ಬಳಕೆ ಮಾಡಿಕೊಳ್ಳುತ್ತಿದ್ದು, ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿರುವ 45 ರೋಗಿಗಳಲ್ಲದೇ ಮತ್ತಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಅರ್ಜಿದಾರರ ಪರ ವಕೀಲರು, 2020ರ ಜನವರಿಯಿಂದ ಯಾವುದೇ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಜನವರಿಯಿಂದ ಇಲ್ಲಿಯವರೆಗೆ ಯಾವ ಸಂದರ್ಭದಲ್ಲೂ ಚಿಕಿತ್ಸೆ ನೀಡುತ್ತಿಲ್ಲ ಎಂಬ ವಿಚಾರ ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಹಾಗಿದ್ದೂ ಒಂದು ವೇಳೆ ಯಾರಿಗಾದರೂ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂದಾದರೆ ಅಂತಹ ಹೆಸರು ಮತ್ತು ವಿವರಗಳನ್ನು ಸಲ್ಲಿಸಿ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.