ಬೆಂಗಳೂರು: ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದು ಸವಾರ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಾಣವಾರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎನ್ಎಂಎಚ್ ಲೇಔಟ್ ನಿವಾಸಿ ಭರತ್ ಕುಮಾರ್(27) ಮೃತರು. ಪವನ್ ಗಾಯಗೊಂಡ ಹಿಂಬದಿ ಸವಾರ. ಸೋಮವಾರ ಮುಂಜಾನೆ ಸುಮಾರು 3 ಗಂಟೆಯ ಸುಮಾರಿಗೆ ಹೆಸರಘಟ್ಟ ಮುಖ್ಯರಸ್ತೆಯ ಡಿಮಾರ್ಟ್ ಬಳಿ ಅಪಘಾತ ಸಂಭವಿಸಿದೆ.
ವಿದ್ಯಾನಗರದಲ್ಲಿ ಬಟ್ಟೆ ಅಂಗಡಿ ಹೊಂದಿರುವ ಭರತ್ ಕುಮಾರ್ ಮತ್ತು ಪವನ್, ಮುಂಜಾನೆ ತಮ್ಮ ದ್ವಿಚಕ್ರ ವಾಹನದಲ್ಲಿ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಅತಿವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಪಕ್ಕದಲ್ಲೇ ಬರುತ್ತಿದ್ದ ಆಟೋಗೆ ಗುದ್ದಿದ್ದಾರೆ. ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದರು.
ಬಳಿಕ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು, ಭರತ್ ಕುಮಾರ್ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಹಿಂಬದಿ ಸವಾರ ಪವನ್‌ಗೆ ಚಿಕಿತ್ಸೆ ಮುಂದುವರೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲಿಸಿದ್ದು, ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಚಿಕ್ಕಬಾಣವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಮನಗರ: ಕಾರು - ಲಾರಿ ಮಧ್ಯೆ ಅಪಘಾತ; ಮೂವರು ಸ್ಥಳದಲ್ಲೇ ಸಾವು