ಬೆಂಗಳೂರು : ರಾಜ್ಯದ ಜನರು ಎದುರು ನೋಡುತ್ತಿರುವ ಬಹುನಿರೀಕ್ಷಿತ ಗೃಹಜ್ಯೋತಿ ಯೋಜನೆಗೆ ಜೂನ್ 15ರ ಬದಲು ಜೂನ್ 18 ರಿಂದ ಅರ್ಜಿ ಸ್ವೀಕರಿಸಲು ಸರ್ಕಾರ ನಿರ್ಧರಿಸಿದೆ. ಈ ಮೊದಲು ಜೂನ್ 15ರಿಂದ ಜುಲೈ 15ರ ವರೆಗೆ ಅರ್ಜಿ ಸ್ವೀಕರಿಸುವ ಹಾಗೂ ಆಗಸ್ಟ್ 15ರ ವರೆಗೂ ಪರಿಶೀಲನೆ ನಡೆಸಿ ಬಳಿಕ ಸ್ವಾತಂತ್ರ್ಯ ದಿನಾಚರಣೆ ದಿನ ಯೋಜನೆ ಅನುಷ್ಠಾನ ಘೋಷಿಸುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿತ್ತು.
ಸೇವಾ ಸಿಂಧು ಪೋರ್ಟಲ್ ಮೂಲಕ ಸರ್ಕಾರಿ ಸಂಸ್ಥೆಗಳ ಬಿಲ್ ಪಾವತಿ ಕೇಂದ್ರಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದು ಸೂಚಿಸಲಾಗಿತ್ತು. ಇದಕ್ಕಾಗಿ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಇದಕ್ಕಾಗಿ ಸಿದ್ಧಪಡಿಸಲಾಗಿರುವ ಸಾಫ್ಟ್ವೇರ್ನಲ್ಲಿ ಕೆಲ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದನ್ನು ಪರಿಶೀಲನೆ ನಡೆಸಿ ಯಾವುದೇ ದೋಷ ಕಂಡು ಬಾರದಂತೆ ನೋಡಿಕೊಳ್ಳಬೇಕಿದೆ. ಹಾಗಾಗಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಎರಡು ದಿನ ಮುಂದೂಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಲಭ್ಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2.14 ಕೋಟಿ ಗೃಹ ಸಂಪರ್ಕದಾರರು ಗೃಹಜ್ಯೋತಿ ಯೋಜನೆಯ ವ್ಯಾಪ್ತಿಗೊಳಪಡುವ ಅರ್ಹತೆ ಹೊಂದಿದ್ದಾರೆ. ಹೀಗಾಗಿ ಅಷ್ಟೂ ಜನರು ಅರ್ಜಿ ಸಲ್ಲಿಸಲು ಮುಂದಾದರೆ ಸೇವಾ ಸಿಂಧು ಪೋರ್ಟಲ್ ತಾಂತ್ರಿಕ ತೊಂದರೆಗೊಳಗಾಗುವ ಸಾಧ್ಯತೆ ಇದೆ. ಅದಕ್ಕಾಗಿ ಅಗತ್ಯ ಸಿದ್ಧತೆ ಕೈಗೊಳ್ಳಲು ಈ ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿದುಬಂದಿದೆ.
ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಕಾಂಗ್ರೆಸ್ ವಿಧಾನಸಭೆ ಚುನಾವಣೆಗೂ ಮುನ್ನ ಹೇಳಿತ್ತು. ಜೊತೆಗೆ ಶಕ್ತಿ, ಯುವನಿಧಿ, ಅನ್ನಭಾಗ್ಯ ಯೋಜನೆ ಸೇರಿದಂತೆ ಇನ್ನೂ ನಾಲ್ಕು ಯೋಜನೆಗಳನ್ನು ಘೋಷಣೆ ಮಾಡಿತ್ತು. ಈಗ ಅಧಿಕಾರಕ್ಕೆ ಬಂದ ಬಳಿಕ ಯೋಜನೆಯ ಜಾರಿಗೆ ಮುಂದಾಗಿರುವ ಕಾಂಗ್ರೆಸ್, ಈ ಬಗ್ಗೆ ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ. ಅರ್ಜಿಯೊಂದಿಗೆ ತಾವು ವಾಸವಾಗಿರುವ ಸ್ವಂತ ಅಥವಾ ಬಾಡಿಗೆ ಮನೆಗೆ ನೀಡಲಾಗಿರುವ ವಿದ್ಯುತ್ ಸಂಪರ್ಕದ ಆರ್ಆರ್ ನಂಬರ್ ಅನ್ನು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ಅದಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕಿದೆ.
ಇದನ್ನೂ ಓದಿ: ಉಚಿತ ವಿದ್ಯುತ್ ಗ್ಯಾರಂಟಿ ಬರೆ ಮಧ್ಯೆ ಎಸ್ಕಾಂಗಳಿಗೆ ವಿದ್ಯುತ್ ಖರೀದಿ ಹೊರೆ
ಗೃಹ ಜ್ಯೋತಿಯ ಲಾಭ ಪಡೆಯಲು ಆಧಾರ್ ಕಾರ್ಡ್ - ಆರ್ಆರ್ ನಂಬರ್ ಲಿಂಕ್ ಮಾಡಲು ಸಲ್ಲಿಸಬೇಕಿರುವ ಅರ್ಜಿಯ ಜೊತೆಗೆ ಅರ್ಜಿದಾರರು ಬಾಡಿಗೆ ಮನೆಯಲ್ಲಿದ್ದರೆ, ಆ ಮನೆಯ ಮಾಲೀಕರೊಂದಿಗೆ ತಾವು ಮಾಡಿಕೊಂಡಿರುವ 11 ತಿಂಗಳ ಬಾಡಿಗೆ ಕರಾರು ಪತ್ರದ ನಕಲಿ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಮನೆಗಳನ್ನು ಭೋಗ್ಯಕ್ಕೆ ಪಡೆದಿದ್ದರೆ, ಕಾನೂನು ಪ್ರಕಾರ ಎರಡು ವರ್ಷಗಳ ಅವಧಿಯ ಭೋಗ್ಯ ಕರಾರು ಪತ್ರದ ನಕಲಿ ಪ್ರತಿಯನ್ನು ಅರ್ಜಿಯೊಂದಿಗೆ ನೀಡಬೇಕು. ಅದರ ಜೊತೆಗೆ, ಮನೆ ಮಾಲೀಕರಿಂದ ತಮ್ಮ ಮಾಲೀಕತ್ವದ ಮನೆಯಲ್ಲಿ ಅರ್ಜಿದಾರರು ಬಾಡಿಗೆ ಇದ್ದಾರೆಂಬುದನ್ನು ಪ್ರತ್ಯೇಕವಾಗಿ ದೃಢೀಕರಿಸಿದ ಪತ್ರವನ್ನೂ ಇದರ ಜೊತೆಗೆ ನೀಡಬೇಕಿದೆ.
ಇದನ್ನೂ ಓದಿ: ಮಧ್ಯಪ್ರದೇಶ ಗೆಲ್ಲಲು ಕಾಂಗ್ರೆಸ್ನ ಕರ್ನಾಟಕ ಮಂತ್ರ.. ರಾಹುಲ್ - ಖರ್ಗೆ ಜಂಟಿ ರ‍್ಯಾಲಿಗೆ ಮಹಾಪ್ಲಾನ್!