ಬೆಂಗಳೂರು: ಸಾಹಿತಿಗಳಿಗೆ ಬೆದರಿಕೆ ಪತ್ರ ಬರುತ್ತಿರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ರೀತಿಯ ರಕ್ಷಣೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ಇಬ್ಬರಿಗೆ ರಕ್ಷಣೆ ಕೊಟ್ಟಿದ್ದೆವು. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ಮಾಡುತ್ತೇವೆ. ಹಿರಿಯ ಅಧಿಕಾರಿಗಳೇ ಈ ಬಗ್ಗೆ ತನಿಖೆ ನಡೆಸುತ್ತಾರೆ. ಸಾಹಿತಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಒಂದು ವರ್ಗದ ಜನ ವಿರೋಧಿಸುವ ಕೆಲಸ ಮಾಡ್ತಿದ್ದಾರೆ. ಸೈದ್ಧಾಂತಿಕ ವ್ಯತ್ಯಾಸಗಳಿಂದಾಗಿಯೇ ಗೌರಿ ಲಂಕೇಶ್ ಹಾಗೂ ಎಂ.ಎಂ.ಕಲ್ಬುರ್ಗಿ ಅವರ ಹತ್ಯೆಗಳಾಗಿದೆ ಎಂದರು.
ರಾಜ್ಯದ ಹೆಸರಾಂತ ಸಾಹಿತಿಗಳಲ್ಲಿ ಕೆಲವರು ಹಿರಿಯ ಸಾಹಿತಿಗಳು, ಮರುಳ ಸಿದ್ದಪ್ಪ ನೇತೃತ್ವದಲ್ಲಿ ನನ್ನನ್ನು ಭೇಟಿ ಮಾಡಿದ್ದಾರೆ. ಹದಿನೈದು ದಿನಗಳ ಹಿಂದೆ ಪತ್ರ ಬರೆದು ಬೆದರಿಕೆ ಪತ್ರ, ಕರೆಗಳು ಬರುತ್ತಿವೆ ಎಂಬುದನ್ನು ನನ್ನ ಗಮನಕ್ಕೆ ತಂದಿದ್ದರು. ನಮ್ಮನ್ನು ಯಾವ ರೀತಿ ರಕ್ಷಣೆ ಮಾಡ್ತೀರಿ ಎಂದು ಪ್ರಶ್ನಿಸಿದ್ದರು. ಆ ಪತ್ರವನ್ನು ಡಿಜಿಪಿಗೆ ಕಳುಹಿಸಿದ್ದೇನೆ. ಯಾರಿಗೆ ಪರ್ಸನಲ್ ಸೆಕ್ಯೂರಿಟಿ ಬೇಕೋ ಕೊಡ್ತೇವೆ. ಗನ್ ಮ್ಯಾನ್ಗಳನ್ನು ಕೂಡ ಕೊಡ್ತೇವೆ ಅಂತಾ ಹೇಳಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಸಾಹಿತಿ ಮರುಳು ಸಿದ್ದಪ್ಪ ಮಾತನಾಡಿ, ಬಿಜೆಪಿ ಅಪಾಯಕಾರಿ ದಾರಿ ಹಿಡಿದಿದೆ. ಅದನ್ನು ನಾವು ಟೀಕೆ ಮಾಡಿದ್ದೇವೆ. ಮುಕ್ತವಾಗಿ ಮಾತನಾಡುವುದರಿಂದ ಆತಂಕ ಆಗಿದೆ. ಅವರ ಫ್ಯಾಸಿಸ್ಟ್ ಮನೋಭಾವನೆಯನ್ನು ಖಂಡಿಸುತ್ತೇವೆ. ಅದಕ್ಕೆ ನಮ್ಮ ಬಾಯಿ ಮುಚ್ಚಿಸಲು ಮಾಡ್ತಿದ್ದಾರೆ. ಗೌರಿ ಲಂಕೇಶ್ ಹತ್ಯೆ ಯಾಕಾಯ್ತು ಅಂತಾ ಗೊತ್ತಿದೆ. ಅದೇ ಗುಂಪು ನಮ್ಮನ್ನು ಬೆದರಿಸುತ್ತಿದೆ. ಆ ಗುಂಪನ್ನು ಪತ್ತೆ ಹಚ್ಚಬೇಕು, ಇಡೀ ದೇಶಕ್ಕೆ ಗೊತ್ತಾಗಬೇಕು. ದೇಶದಲ್ಲಿ ಭಯಾನಕ ವಾತಾವರಣವನ್ನು ಹರಡಿಸುತ್ತಿದ್ದಾರೆ. ಇವರು ಅಪಾಯಕಾರಿಗಳು, ಆತಂಕ ಸೃಷ್ಟಿ ಮಾಡುತ್ತಿರುವುದನ್ನು ಬಯಲಿಗೆ ಎಳೆಯಬೇಕು ಎಂದು ಒತ್ತಾಯಿಸಿದ ಅವರು, ನಾವು ಯಾವ ಪಕ್ಷದ ಪರವೂ ಇಲ್ಲ, ವಿರುದ್ಧವೂ ಇಲ್ಲ. ಬಹುತ್ವದ ಸಂಸ್ಕೃತಿಯನ್ನು ಸಂವಿಧಾನವನ್ನು ಉಳಿಸಬೇಕು ಎಂದರು.
ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ: ಸಾಹಿತಿಗಳು ಹಾಗೂ ಪ್ರಗತಿಪರರಿಗೆ ಬೆದರಿಕೆ ಪತ್ರ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಹೇಳಿದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀವ ಬೆದರಿಕೆ ಪತ್ರ ಬಂದಿರುವ ಎರಡು ಪ್ರಕರಣಗಳಿವೆ. ತನಿಖೆ ನಡೆಯುತ್ತಿದೆ. ಇದು ಸೂಕ್ಷ್ಮ ಪ್ರಕರಣ ಆಗಿರೋದ್ರಿಂದ ಹೆಚ್ಚಿನ ಮಾಹಿತಿ ನೀಡೋಕೆ ಆಗಲ್ಲ. ಬೆದರಿಕೆ ಪತ್ರ ಬರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಯಾವ ಸಂದರ್ಭದಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಇನ್ನು, ರಸ್ತೆ ಹೆದ್ದಾರಿ ದರೋಡೆ ಪ್ರಕರಣಗಳ ಬಗ್ಗೆ ಮಾತನಾಡಿ, ಪ್ರಕರಣಗಳನ್ನು ಬೇಧಿಸಿದ ಬಳಿಕ ದರೋಡೆ ನಿಲ್ಲುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚೆಕ್ ಪೋಸ್ಟ್ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಅಕ್ರಮವಾಗಿ ಚಿನ್ನ ಸಾಗಾಟ ಮಾಡುವವರನ್ನು ದರೋಡೆಕೋರರು ಟಾರ್ಗೆಟ್ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದರೋಡೆಕೋರರ ಗ್ಯಾಂಗಿನ ಎಲ್ಲರ ಬಂಧನಕ್ಕೂ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕಳೆದ 20 ವರ್ಷದಿಂದ ಚಾಮರಾಜನಗರ ಡಿಆರ್ ಪೊಲೀಸರಿಗೆ ಪ್ರಮೋಷನ್ ದೊರೆಯದ ವಿಚಾರದ ಬಗ್ಗೆ ಮಾತನಾಡಿ, ಇಲ್ಲಿನ 24 ಜನರಿಗೆ ಸಮಸ್ಯೆ ಆಗ್ತಿದೆ. ಎಸ್‌ಟಿಎಫ್ ಇದ್ದಾಗಿಂದ ಅದನ್ನು ಚಾಮರಾಜನಗರಕ್ಕೆ ಅಲಾಟ್ ಮಾಡಿದ್ರು. ವಯೋಮಿತಿ 45 ವರ್ಷ ಮುಗಿದಿರೋದ್ರಿಂದ ಪ್ರಮೋಷನ್ಗೆ ಪರಿಗಣಿಸಲು ಸಾಧ್ಯವಾಗ್ತಿಲ್ಲ. ಪೊಲೀಸ್ ಪ್ರಧಾನ ಕಾರ್ಯದರ್ಶಿ ಜೊತೆ ಮಾತಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಭರವಸೆ ಕೊಟ್ಟರು.
ಇದನ್ನೂ ಓದಿ: ಅನಧಿಕೃತ ಕಟ್ಟಡಗಳ ತೆರವಿಗೆ ಕ್ರಿಯಾ ಯೋಜನೆ ತಯಾರಿ: ತುಷಾರ್ ಗಿರಿನಾಥ್