ಬೆಂಗಳೂರು : ಇಲಾಖಾವಾರು ಪ್ರಗತಿ, ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆಗೆ ಪ್ರತಿ ತಿಂಗಳು ಕೆಡಿಪಿ ಸಭೆ ಕೈಗೊಳ್ಳಲಾಗುತ್ತದೆ. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆ ಮೂಲಕ ಇಲಾಖೆ, ಯೋಜನೆಗಳಿಗೆ ಚುರುಕು ಮುಟ್ಟಿಸಲಾಗುತ್ತದೆ. ಆದರೆ, ಕಳೆದ ಮೂರು ತಿಂಗಳಿಂದ ಈ ಮಹತ್ವದ ಕೆಡಿಪಿ ಸಭೆ ನಡೆಸಲು ಸರ್ಕಾರ ಮರೆತಿದೆ.
ಪ್ರತಿ ತಿಂಗಳು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಈ ನಿರ್ಣಾಯಕ ಸಭೆ ನಡೆಯುತ್ತದೆ. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯ ಮೂಲಕ ರಾಜ್ಯದ ಅಭಿವೃದ್ಧಿ ಯೋಜನೆಗಳ ಪ್ರಗತಿ, ಇಲಾಖಾವಾರು ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ. ಈ ಸಭೆ ಮೂಲಕ ಅಭಿವೃದ್ಧಿ ಯೋಜನೆಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗುತ್ತದೆ.
ಪ್ರತಿ ತಿಂಗಳು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಸಲಾಗುತ್ತದೆ. ಈ ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಭಾಗಿಯಾಗಿ ಇಲಾಖಾವಾರು ಯೋಜನೆಗಳು, ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಾಗುತ್ತದೆ.
ಅನುಷ್ಠಾನದಲ್ಲಿನ ವಿಳಂಬ, ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಚುರುಕು ಮುಟ್ಟಿಸಲಾಗುತ್ತದೆ. ಪ್ರತಿ ಸಭೆಯಲ್ಲಿ ಇಲಾಖಾವಾರು ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿ, ಇನ್ನಷ್ಟು ವೇಗ ನೀಡಲು ಸೂಚನೆ ನೀಡಲಾಗುತ್ತದೆ. ಹಾಗಾಗಿ, ಕೆಡಿಪಿ ಸಭೆ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನಕ್ಕೆ ಚುರುಕು ಮುಟ್ಟಿಸುವ ನಿರ್ಣಾಯಕ ಸಭೆಯಾಗಿದೆ.
ಮೂರು ತಿಂಗಳಿಂದ ಕೆಡಿಪಿ ಸಭೆ ಮರೆತ ಸರ್ಕಾರ : ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಗೂ ಇಲಾಖೆಗಳಿಗೆ ಚುರುಕು ಮುಟ್ಟಿಸುವ ಕೆಡಿಪಿ ಸಭೆಯನ್ನು ಕಳೆದ ಮೂರು ತಿಂಗಳಿಂದ ನಡೆಸಲು ಸರ್ಕಾರ ಮರೆತೆ ಬಿಟ್ಟಿದೆ. ಕಳೆದ ನವೆಂಬರ್, ಡಿಸೆಂಬರ್ ಹಾಗೂ ಜನವರಿಯಲ್ಲಿ ನಡೆಸ ಬೇಕಾಗಿದ್ದ ಕೆಡಿಪಿ ಸಭೆ ಮಾಡೇ ಇಲ್ಲ.
ಈಗಾಗಲೇ ಆರ್ಥಿಕ ಸಂಕಷ್ಟದಿಂದ ಹಲವು ಯೋಜನೆಗಳ ಅನುಷ್ಠಾನ ಕುಂಠುತ್ತಾ ಸಾಗುತ್ತಿದೆ. ಬಜೆಟ್ ಅನುಷ್ಠಾನದಲ್ಲೂ ಹಲವು ಇಲಾಖೆಗಳು ಹಿಂದೆ ಬಿದ್ದಿವೆ. ಡಿಸೆಂಬರ್ವರೆಗೆ ಬಜೆಟ್ ಅನುಷ್ಠಾನ ಕೇವಲ ಶೇ.55ರಷ್ಟು ಮಾತ್ರ ಆಗಿದೆ. ಪರಿಸ್ಥಿತಿ ಹೀಗಿರುವಾಗ ಕೆಡಿಪಿ ಸಭೆ ಮಹತ್ವದ ಪಾತ್ರ ವಹಿಸುತ್ತದೆ. ಕೆಡಿಪಿ ಸಭೆ ಮೂಲಕ ಚುರುಕು ಮುಟ್ಟಿಸುವ ಕೆಲಸ ಮಾಡಬೇಕಾಗಿತ್ತು. ಆದರೆ, ಸಭೆಯ ಬಗ್ಗೆ ಮುಖ್ಯ ಕಾರ್ಯದರ್ಶಿ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಪ್ರಶ್ನೆ ಮೂಡಿದೆ.
ಕೆಡಿಪಿ ಸಭೆ ಕುಂಠುತ್ತಾ ಸಾಗುತ್ತಿರುವ ಇಲಾಖಾವರು ಯೋಜನೆ, ಕಾರ್ಯಕ್ರಮಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತದೆ. ಆದರೆ ಕಳೆದ ಮೂರು ತಿಂಗಳಿಂದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಕೆಡಿಪಿ ಸಭೆ ನಡೆಸುವ ಗೋಜಿಗೆ ಹೋಗಿಲ್ಲ. ಈಗಾಗಲೇ ಆಡಳಿತದಲ್ಲಿ ಚುರುಕು ಕಳೆದುಕೊಂಡಿರುವ ಆರೋಪ ಕೇಳಿ ಬರುತ್ತಿದ್ದು, ಈ ಸನ್ನಿವೇಶದಲ್ಲಿ ಕೆಡಿಪಿ ಸಭೆ ನಡೆಸದೆ ಇರುವುದು ಹಲವು ಅನುಮಾನ ಮೂಡಿಸಿದೆ. ಅದರಲ್ಲೂ ಸತತ ಮೂರು ತಿಂಗಳು ಕೆಡಿಪಿ ಸಭೆ ನಡೆಸದೇ ಇರುವುದು ಮುಖ್ಯ ಕಾರ್ಯದರ್ಶಿಯವರ ನಿರ್ಲಕ್ಷ್ಯ ಧೋರಣೆ ಎದ್ದು ತೋರಿಸುತ್ತಿದೆ ಎಂದು ಪ್ರತಿಪಕ್ಷದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜೆಟ್ ಅನುಷ್ಠಾನ, ಯೋಜನೆಗಳ ಪ್ರಗತಿ ಕುಂಠಿತ : ಒಂದೆಡೆ ಕೆಡಿಪಿ ಸಭೆ ನಡೆಸದೆ ಮೂರು ತಿಂಗಳೇ ಕಳೆದಿದೆ. ಇನ್ನೊಂದೆಡೆ ಬಜೆಟ್ ಅನುಷ್ಠಾನ ಹಾಗೂ ಪ್ರಮುಖ ಯೋಜನೆಗಳ ಪ್ರಗತಿಯಲ್ಲಿ ಕುಂಠಿತವಾಗಿದೆ. 2021-22ಸಾಲಿನ ಬಜೆಟ್ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಹಿಂದೆ ಬಿದ್ದಿದೆ. ಡಿಸೆಂಬರ್ವರೆಗಿನ ಅಂಕಿ-ಅಂಶದ ಪ್ರಕಾರ ಬಜೆಟ್ ಅನುಷ್ಠಾನದ ಪ್ರಗತಿ ಕೇವಲ 55% ಮಾತ್ರ ಇದೆ. ಪ್ರಸಕ್ತ ಹಣಕಾಸು ವರ್ಷ ಮುಗಿಯಲು ಇನ್ನು ಎರಡು ತಿಂಗಳು ಇದ್ದು, ಬಹುತೇಕ ಇಲಾಖೆಗಳಲ್ಲಿನ ಪ್ರಗತಿ 40-50% ಆಸುಪಾಸಿನಲ್ಲೇ ಇದೆ.
ಇತ್ತ ಮಹತ್ವದ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನವೂ ಕುಂಠಿತವಾಗಿದೆ. ಡಿಸೆಂಬರ್ವರೆಗೆ ಈ ಯೋಜನೆಯ ಭೌತಿಕ ಪ್ರಗತಿ ಕೇವಲ 59% ಮಾತ್ರ ಇದೆ. ಇತ್ತ ಆರ್ಥಿಕ ಪ್ರಗತಿ ಕೇವಲ 18% ಇದೆ. ಇನ್ನು ಪ್ರಧಾನಮಂತ್ರಿಗಳ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆ ಅನುಷ್ಠಾನದ ಪ್ರಗತಿಯೂ ಗತಿ ಕಳೆದುಕೊಂಡಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಸಾಲ ವಿತರಣೆಯ ಪ್ರಗತಿ ಕಡಿಮೆ ಇದೆ. ಸುಮಾರು 56% ಪ್ರಗತಿ ಮಾತ್ರ ಸಾಧ್ಯವಾಗಿದೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ನಗರ) ಪ್ರಗತಿಯಲ್ಲಂತೂ ತೀರಾ ಹಿಂದಕ್ಕೆ ಬಿದ್ದಿದೆ. ಈವರೆಗೆ ಕೇವಲ 35% ಪ್ರಗತಿ ಮಾತ್ರ ಸಾಧ್ಯವಾಗಿದೆ. ಅದೇ ರೀತಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಅನುಷ್ಠಾನದಲ್ಲೂ ಪ್ರಗತಿ ಕುಂಠಿತವಾಗಿದೆ. ಹಲವು ಯೋಜನೆಗಳ ಅನುಷ್ಠಾನದಲ್ಲಿ ಪ್ರಗತಿ ಕುಂಠಿತವಾಗುತ್ತಿರುವ ಈ ಸನ್ನಿವೇಶದಲ್ಲಿ ಪ್ರಗತಿಗೆ ಚುರುಕು ಮುಟ್ಟಿಸಬೇಕಾದ ಕೆಡಿಪಿ ಸಭೆಯನ್ನೆ ಮಾಡದಿರುವುದು ಸರ್ಕಾರದ ಗಾಂಭೀರ್ಯತೆಯನ್ನು ತೋರಿಸುತ್ತದೆ.