ಬೆಂಗಳೂರು : ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದನ್ನು ಬಿಟ್ಟು ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ ಸರ್ಕಾರ ಇದೀಗ ಚುನಾವಣೆ ನಡೆಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ರಾಜ್ಯ ಸರ್ಕಾರ ಕೊರೊನಾ ಕಾರಣಕ್ಕಾಗಿ ಗ್ರಾಪಂ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ ಎಂಬ ನೆಪವೊಡ್ಡಿ ಈವರೆಗೂ ಚುನಾವಣೆಯನ್ನು ಮುಂದೂಡುತ್ತಾ ಬಂದಿದೆ. ಚುನಾವಣೆ ನಡೆಸಲು ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕಾಂಗ್ರೆಸ್ ಮುಖಂಡರು ಸಲ್ಲಿಸಿರುವ ಪಿಐಎಲ್ ವಿಚಾರಣೆ ಸಂದರ್ಭದಲ್ಲಿಯೂ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಇದೇ ನೆಪ ಹೇಳಿದೆ. ಆದರೆ, ನಿಯಮಗಳ ಪ್ರಕಾರ ಸರ್ಕಾರಕ್ಕೆ ಇನ್ನು ಚುನಾವಣೆ ಮುಂದೂಡಲು ಅವಕಾಶವಿಲ್ಲ.
ಸರ್ಕಾರ ಹೇಳುತ್ತಿರುವುದೇನು :
ರಾಜ್ಯದಲ್ಲಿರುವ ಒಟ್ಟು 6,025 ಗ್ರಾಮ ಪಂಚಾಯಿತಿಗಳಲ್ಲಿ 5,800 ಗ್ರಾಮ ಪಂಚಾಯಿತಿಗಳ ಅವಧಿ ಜೂನ್ ನಿಂದ ಆಗಸ್ಟ್ ವೇಳೆಗೆ ಮುಕ್ತಾಯವಾಗಿದೆ. ಈ ಗ್ರಾಪಂಗಳಿಗೆ ಚುನಾವಣೆ ನಡೆಸಬೇಕಿದ್ದರೂ, ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾ.ಪಂ. ಚುನಾವಣೆಗಳನ್ನು ನಡೆಸಲಾಗುತ್ತಿಲ್ಲ. ಅಧಿಕಾರಿ ವರ್ಗ ಸೋಂಕು ನಿಯಂತ್ರಣದಲ್ಲಿ ತೊಡಗಿರುವುದರಿಂದಲೂ ಚುನಾವಣೆ ಕಷ್ಟ ಎಂದು ಹೇಳುತ್ತಿದೆ. ಇದಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್, ಕಿಷನ್ ಸಿಂಗ್ ವರ್ಸಸ್ ಅಹಮದಾಬಾದ್ ಸಿಟಿ ಮುನಿಸಿಪಲ್ ಕಾರ್ಪೊರೇಷನ್ ಪ್ರಕರಣದಲ್ಲಿ ನೈಸರ್ಗಿಕ ವಿಪತ್ತು ಎದುರಾದಾಗ ಚುನಾವಣೆ ನಡೆಸುವುದು ಕಷ್ಟವಾಗಲಿದೆ ಎಂದು ವ್ಯಕ್ತಪಡಿಸಿರುವ ಅಭಿಪ್ರಾಯ ಮಂದಿಟ್ಟುಕೊಂಡು ಕೂತಿದೆ.
ಅಸಲಿ ಕಾರಣವೇನು :
ವಾಸ್ತವವಾಗಿ ಕೊರೊನಾ ಸೋಂಕಷ್ಟೇ ಚುನಾವಣೆಗೆ ಅಡ್ಡಿಯಾಗಿಲ್ಲ. ಬದಲಿಗೆ ಸರ್ಕಾರಕ್ಕೆ ಚನಾವಣೆ ನಡೆಸುವ ಇಚ್ಚೆಯೇ ಇಲ್ಲ. ಇದಕ್ಕೆ ಕಾರಣಗಳು ಹಲವಿದ್ದರೂ, ಪ್ರಮುಖ ಕಾರಣ ಖಜಾನೆಯಲ್ಲಿ ಹಣ ಇಲ್ಲದಿರುವುದು. ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಪಂಗಳ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ 250 ಕೋಟಿ ರೂಪಾಯಿ ಕೇಳಿದೆ. ಆದರೆ ಸರ್ಕಾರ ಈವರೆಗೂ ಪೂರ್ತಿ ಹಣವನ್ನು ಬಿಡುಗಡೆ ಮಾಡಿಲ್ಲ. ಸರ್ಕಾರದ ಆರ್ಥಿಕ ಪರಿಸ್ಥಿತಿ ಯಾವ ಪರಿ ಹದಗೆಟ್ಟಿದೆ ಎಂದರೆ ಮಂಗಳೂರಿನ ಘನತ್ಯಾಜ್ಯ ದರಂತದಲ್ಲಿ ಮೃತಪಟ್ಟವರಿಗೆ 14 ಕೋಟಿ ರೂ. ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೈಕೋರ್ಟ್ ಎದುರು ಅಸಹಾಯಕತೆ ತೋಡಿಕೊಂಡಿತ್ತು.
ಸರ್ಕಾರದ ಬಳಿ ಹಣ ಇಲ್ಲದಿರುವುದರಿಂದಲೇ ಬಹುತೇಕ ಕಾಮಗಾರಿಗಳಿಗೆ ನಿಗದಿತ ಅವಧಿಯಲ್ಲಿ ಹಣ ಬಿಡುಗಡೆ ಆಗುತ್ತಿಲ್ಲ. ನೇರ ನೇಮಕಾತಿಯನ್ನೂ ಆರ್ಥಿಕ ಕಾರಣಕ್ಕಾಗಿ ಮುಂದೂಡುತ್ತಿದೆ. ಈಗಾಗಲೇ ಗ್ರಾಪಂಗಳ ಆಡಳಿತಾಧಿಕಾರಿಗಳಿಗೆ ಯಾವುದೇ ಹಣಕಾಸು ವ್ಯವಹಾರ ನಡೆಸದಂತೆ ಸೂಚಿಸಿರುವ ಸರ್ಕಾರ ಚುನಾವಣೆ ನಡೆಸಿದರೆ ಪಂಚಾಯ್ತಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೂ ಹಣ ಕೊಡಬೇಕಾಗುತ್ತದೆ. ಗ್ರಾಪಂಗಳ ಚುನಾವಣೆಯಿಂದ ಸರ್ಕಾರಕ್ಕೆ ಯಾವುದೇ ಲಾಭವಿಲ್ಲ. ಈ ಕಾರಣಕ್ಕಾಗಿಯೇ ಸರ್ಕಾರ ಸರ್ಕಾರ ಚುನಾವಣೆಯನ್ನು ಮುಂದೂಡಲು ಪ್ರಯತ್ನಿಸುತ್ತಿದೆ.
ಕಾಯ್ದೆ ಹೇಳುವುದೇನು :
ಸಂವಿಧಾನದ ವಿಧಿ 243(ಇ) ಪ್ರಕಾರ ಯಾವುದೇ ಚುನಾಯಿತ ಸಂಸ್ಥೆಗೆ ಅದರ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆಸಿ ಹೊಸ ಆಡಳಿತಕ್ಕೆ ಅವಕಾಶ ಕಲ್ಪಿಸಬೇಕು. ಅದೇ ರೀತಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಸೆಕ್ಷನ್ 308(ಎ) ಪ್ರಕಾರ ಅವಧಿ ಮುಗಿಯುವ ಮುನ್ನವೇ ಗ್ರಾಪಂ ಗಳಿಗೆ ಚುನಾವಣೆ ನಡೆಸಬೇಕು. ಒಂದು ವೇಳೆ ಅಸಾಧ್ಯ ಪರಿಸ್ಥಿತಿಗಳಲ್ಲಿ ಚುನಾವಣೆ ನಡೆಸಲು ಸಾಧ್ಯವಾಗದಿದ್ದರೆ 6 ತಿಂಗಳ ಅವಧಿಗೆ ಆಡಳಿತಾಧಿಕಾರಿ ನೇಮಿಸಬಹುದು. ಆದರೆ 6 ತಿಂಗಳ ಬಳಿಕ ಆಡಳಿತಾಧಿಕಾರಿಗಳನ್ನು ಮುಂದವರೆಸುವಂತಿಲ್ಲ.
ಚುನಾವಣೆ ಅನಿವಾರ್ಯ :
ಸಂವಿಧಾನ ಹಾಗೂ ಕಾಯ್ದೆ ಹೇಳುವಂತೆ ಸರ್ಕಾರ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಲೇಬೇಕಿದೆ. ಅವಧಿ ಮುಗಿದಿರುವ ಗ್ರಾಪಂ ಗಳಿಗೆ ನೇಮಿಸಿರುವ ಆಡಳಿತಾಧಿಕಾರಿಗಳ ಅವಧಿ ಡಿಸೆಂಬರ್ ವೇಳೆಗೆ ಮುಕ್ತಾಯವಾಗಲಿದೆ. ಇವರನ್ನು ಮತ್ತೊಂದು ಅವಧಿಗೆ ನೇಮಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಹಿಂದಿನ ಚುನಾಯಿತ ಸದಸ್ಯರ ಅವಧಿಯನ್ನು ಮುಂದುವರೆಸಲಾಗದು ಎಂದು ಈಗಾಗಲೇ ಹೈಕೋರ್ಟ್ ಸ್ಪಷ್ಟವಾಗಿ ಹೇಳಿರುವುದರಿಂದ ಈ ಸಾಧ್ಯತೆಯೂ ಇಲ್ಲ. ಹಾಗಾಗಿ ಗ್ರಾಪಂಗಳು ಅಸ್ಥಿತ್ವದಲ್ಲಿವೆ ಎನ್ನಬೇಕಾದರೆ ಚುನಾವಣೆ ಅನಿವಾರ್ಯ. ರಾಜ್ಯ ಚುನಾವಣಾ ಆಯೋಗ ಕೂಡ ನವೆಂಬರ್ ನಲ್ಲಿ ಚುನಾವಣೆ ನಡೆಸಲು ಸಿದ್ದತೆ ಮಾಡಿಕೊಂಡಿದ್ದು, ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ದಿನಾಂಕಗಳ ವಿವರವನ್ನು ಹೈಕೋರ್ಟ್ ಗೆ ಸಲ್ಲಿಸಿದೆ. ಹೈಕೋರ್ಟ್ ಒಂದು ವೇಳೆ ಚುನಾವಣೆ ನಡೆಸಲೇಬೇಕು ಎಂದು ಆದೇಶಿಸಿದರೆ ಸರ್ಕಾರಕ್ಕೆ ಎರಡನೇ ಆಯ್ಕೆ ಇಲ್ಲದಂತಾಗಲಿದೆ.
ಕಾನೂನು ತಜ್ಞರು ಹೇಳುವುದೇನು :
ಈ ಕುರಿತು ಹೈಕೋರ್ಟ್ ನ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ ಅವರು ಹೇಳುವಂತೆ, ವಿಶೇಷ ಕಾರಣಗಳನ್ನು ನೀಡಿ ಚುನಾವಣೆಗಳನ್ನು ನಡೆಸದೇ ಇರಬಹುದು. ಆದರೆ, ಅವಧಿ ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಒಂದೊಮ್ಮೆ ಅಸಾಧ್ಯವಾದ ಪರಿಸ್ಥಿತಿಗಳಿದ್ದರೆ ಅದನ್ನು ನ್ಯಾಯಾಲಯಲಕ್ಕೆ ಮನವಿ ಮಾಡಿಕೊಡಬೇಕು. ಈಗಿನ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೇಂದ್ರ ಸುಗ್ರೀವಾಜ್ಞೆ ಮೂಲಕ ಅಥವಾ ಸಂವಿಧಾನಕ್ಕೆ ತಿದ್ದುಪಡಿ ತಂದು ಚುನಾವಣೆಯನ್ನು ಮುಂದೂಡಬಹುದು.
ಹೈಕೋರ್ಟ್ನ ಮತ್ತೋರ್ವ ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು ಹೇಳುವಂತೆ, ಇದು ಸಂವಿಧಾನ ಮತ್ತು ಕಾನೂನು ಸೂಕ್ಷ್ಮ ವಿಚಾರ. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತರುವುದು ಕಷ್ಟ. ಒಂದು ರಾಜ್ಯಕ್ಕೆ ಸೀಮಿತವಾಗಿ ಸುಗ್ರೀವಾಜ್ಞೆ ತರಲು ಕೇಂದ್ರಕ್ಕೆ ಅವಕಾಶವಿಲ್ಲ. ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆ ಮತ್ತು ರಾಷ್ಟ್ರೀಯ ವಿಪತ್ತು ಆಧಾರದಲ್ಲಿ ಎಲ್ಲಾ ಚುನಾವಣೆಗಳಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಬಹುದು. ಬರೀ ರಾಜ್ಯವೊಂದರ ಗ್ರಾಪಂ ಚುನಾವಣೆ ಕಾರಣಕ್ಕಾಗಿ ಅಲ್ಲ.