ಬೆಂಗಳೂರು: ಧ್ವನಿವರ್ಧಕಗಳನ್ನು ಬಳಸಿ ಜೋರಾಗಿ ಆಜಾನ್ ಕೂಗುವುದರ ವಿರುದ್ಧ ಹಿಂದೂ ಸಂಘಟನೆಗಳು ಅಭಿಯಾನ ನಡೆಸಿದ್ದವು. ಆದರೆ ಇತ್ತ ರಾಜ್ಯ ಸರ್ಕಾರ 10,889 ಮಸೀದಿಗಳೂ ಸೇರಿದಂತೆ ರಾಜ್ಯದಲ್ಲಿ ಒಟ್ಟು 17,850 ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಿದೆ.
ಧ್ವನಿವರ್ಧಕಗಳ ಬಳಕೆ ನಿಯಂತ್ರಣ ನಿಯಮಗಳ ಅಡಿಯಲ್ಲಿ ಪರವಾನಗಿ ಕೋರಿ ಅರ್ಜಿ ಸಲ್ಲಿಸಲು ಮೇ ತಿಂಗಳಲ್ಲಿ ಅವಕಾಶ ಕಲ್ಪಿಸಿ ಗೃಹ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಅದರಂತೆ ಗೃಹ ಇಲಾಖೆ, ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು, ರೆಸ್ಟೋರೆಂಟ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 17,850 ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಿದೆ. ಈ ಪೈಕಿ 10,899 ಮಸೀದಿಗಳಿಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡಿದೆ.
ಮಸೀದಿಗಳಲ್ಲಿ ಜೋರಾಗಿ ಧ್ವನಿವರ್ಧಕ ಬಳಸಿ ಆಜಾನ್ ಕೂಗಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಜೋರಾಗಿ ಧ್ವನಿವರ್ಧಕ ಬಳಸುವ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ಆಗ್ರಹಿಸಿದ್ದವು. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪಿನನ್ವಯ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಲೌಡ್ ಸ್ಪೀಕರ್ ಬಳಸದಂತೆ ಆದೇಶ ಹೊರಡಿಸಿತ್ತು. ಸುಪ್ರೀಂ ಕೋರ್ಟ್ ಮಾರ್ಗಸೂಚಿಯ ಪ್ರಕಾರ ನಿಗದಿತ ಪ್ರಮಾಣದ ಶಬ್ದದ ಮಿತಿಯನ್ನೂ ಜಾರಿಗೊಳಿಸುವಂತೆ ಸೂಚಿಸಿತ್ತು.
ಜೊತೆಗೆ ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಗೊಳಿಸುವಂತೆ ಸೂಚಿಸಲಾಗಿತ್ತು. ಧ್ವನಿವರ್ಧಕಗಳಿಗೆ ಪರವಾನಿಗೆ ಪಡೆಯುವಂತೆ ಗೃಹ ಇಲಾಖೆ ಸುತ್ತೋಲೆ ಹೊರಡಿಸಲಾಗಿತ್ತು. ಅದರಂತೆ ಅರ್ಜಿ ಸಲ್ಲಿಸಿದವರಿಗೆ ಸರ್ಕಾರ ಎರಡು ವರ್ಷ ಅವಧಿಗೆ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಿದೆ. ಬೆಂಗಳೂರಿನಲ್ಲಿ ಒಟ್ಟು 1,841 ಧ್ವನಿವರ್ಧಕಗಳಿಗೆ ಪರವಾನಗಿಗಳನ್ನು ನೀಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅತ್ಯಧಿಕ 744 ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಕೊಡಲಾಗಿದೆ.
ಇದನ್ನೂ ಓದಿ : ಮಸೀದಿ ಧ್ವನಿವರ್ಧಕದಿಂದ ಶಬ್ದ ಮಾಲಿನ್ಯವಾದರೆ ಸುಮ್ಮನಿರಲ್ಲ: ಎನ್ ರವಿಕುಮಾರ್