ಬೆಂಗಳೂರು : ಸಂಧಾನ ವಿಫಲವಾಗಿದ್ದು ನಾಳೆಯಿಂದ (ಮಾ.1) ರಾಜ್ಯ ಸರ್ಕಾರಿ ನೌಕರರು ಮುಷ್ಕರಕ್ಕಿಳಿಯಲಿದ್ದಾರೆ. ವಿಧಾನಸೌಧದಲ್ಲಿ ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸಭೆ ನಡೆಸಿದರು.
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ನಾವು ನಾಳೆಯಿಂದ ಮುಷ್ಕರ ನಡೆಸುವುದು ಖಚಿತ. ನಾಳೆಯಿಂದ ಎಲ್ಲಾ ಸರ್ಕಾರಿ ಸೇವೆಗಳು ಏಕಕಾಲದಲ್ಲಿ ಬಂದ್ ಆಗುತ್ತವೆ ಎಂದರು. ನಾಳೆ ಕರೆದಿರುವ ಹೋರಾಟದ ಸಭೆಯಲ್ಲಿ ಚರ್ಚೆಯಾಗಿದೆ. ಸಮಯಾವಕಾಶ ನೀಡಿ ಅಂತ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯಲ್ಲ ಅಂತ ಹೇಳಿದ್ದೇವೆ. ಮಾ.1 ರಿಂದ ಮುಷ್ಕರ ನಡೆಸಲು ಫೆ.21 ರಂದೇ ನಿರ್ಧಾರ ತೆಗೆದುಕೊಂಡಿದ್ದೆವು. ಏನೇ ಆದರೂ ಚರ್ಚಿಸಿ ತೀರ್ಮಾನ ಮಾಡುತ್ತೇವೆ. 9 ವಿವಿಧ ವೃಂದಗಳ ಜೊತೆಗೆ ಚರ್ಚೆಯಾಗಿದೆ. ಎಲ್ಲರೂ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.
ಜುಲೈನಿಂದ ಶೇ. 40 ಫಿಟ್ಮೆಂಟ್ ಜಾರಿಯಾಗಬೇಕು. ಐದು ರಾಜ್ಯಗಳ ಮಾದರಿಯಂತೆ ಎನ್ಪಿಎಸ್ ರದ್ದು ಮಾಡಿ, ಓಪಿಎಸ್ ಮಾಡಬೇಕು. ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿಗಳು ವೇತನ ಪರಿಷ್ಕರಣೆ ಭರವಸೆ ನೀಡಿದ್ದರು. ಆದರೆ, ಅದರ ಬಗ್ಗೆ ಮುಖ್ಯಮಂತ್ರಿಗಳು ಮಾತೇ ಆಡುತ್ತಿಲ್ಲ. ವೇತನ ಆಯೋಗ ಪರಿಶೀಲನೆ ಭರವಸೆ ನೀಡಿದೆ. ಆದರೆ, ಎಲ್ಲವೂ ಚರ್ಚೆ ಹಂತದಲ್ಲಿ ಇದೆ. ನಾವು ಪ್ರತಿಭಟನೆ ನಡೆಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೂ ಸರ್ಕಾರ ನಮ್ಮ ಬೇಡಿಕೆ ಬಗ್ಗೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದರು.
10 ಲಕ್ಷ ನೌಕರರು ಒಟ್ಟಾಗಿದ್ದೇವೆ: ಒಂಬತ್ತು ತಿಂಗಳ ಬಳಿಕ ಆಯೋಗ ರಚನೆಯಾಗಿದೆ. ಆದರೆ, ಮಧ್ಯಂತರ ವರದಿ ತೆಗೆದುಕೊಂಡು ನಮಗೆ ವೇತನ ನೀಡಬೇಕೆಂದು ಮನವಿ ಮಾಡಿದ್ದೆವು. ಆಗಲೂ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು. ಬರೀ ಚರ್ಚೆಯಾಗಿದೆಯೇ ಹೊರತು ಯಾವುದೇ ನಿರ್ಣಯಕ್ಕೆ ಬಂದಿಲ್ಲ ಎಂದರು. ನಾವು ತೆಗೆದುಕೊಂಡಿರುವ ನಿರ್ಧಾರ ಸ್ಪಷ್ಟವಾಗಿದೆ. ರಾಜ್ಯದಲ್ಲಿ ಹತ್ತು ಲಕ್ಷ ನೌಕರರು ಒಟ್ಟಾಗಿದ್ದೇವೆ. ಎಲ್ಲರೂ ನನಗೆ ಜವಾಬ್ದಾರಿ ನೀಡಿದ್ದಾರೆ. ಮುಷ್ಕರ ಮಾಡುವುದು ನಿಶ್ಚಿತ. ಎಲ್ಲ ವೃಂದದ ಸಂಘಟನೆಗಳು ಒಟ್ಟಿಗೆ ಸೇರಿದ್ದೇವೆ. 27 ವರ್ಷದ ಬಳಿಕ ಅನಿರ್ಧಿಷ್ಟಾವಧಿ ಮುಷ್ಕರ ಮಾಡುತ್ತಿದ್ದೇವೆ. ಎಸ್ಮಾ ಜಾರಿ ಮಾಡಿದರೆ ಅದನ್ನು ಸ್ವಾಗತಿಸುತ್ತೇವೆ ಎಂದು ಷಡಕ್ಷರಿ ಹೇಳಿದರು.
ಸರ್ಕಾರದ ಬಗ್ಗೆ ಗೌರವ ಇದೆ: ನೌಕರರ ಮನಸ್ಥಿತಿಗೆ ವಿರುದ್ಧವಾಗಿ ನಾವು ಹೋಗಲ್ಲ. ಕಡಿಮೆ ವೇತನ ತೆಗೆದುಕೊಳ್ಳುತ್ತಿರುವುದು ರಾಜ್ಯ ಸರ್ಕಾರದ ನೌಕರರು. ನಾವು ಯಾವ ತ್ಯಾಗಕ್ಕೂ ಕೂಡ ಸಿದ್ದರಿದ್ದೇವೆ. ಸಸ್ಪೆಂಡ್, ಡಿಸ್ಮಿಸ್ ಯಾವುದೇ ಕ್ರಮಕ್ಕೂ ನಾವು ಸಿದ್ದ. ಎಲ್ಲಾ ರೀತಿ ಯೋಚನೆ ಮಾಡಿ ನಿರ್ಧಾರ ಆಗಿದೆ. ಪಾಠ ಮಾಡಿದವರು ಪರೀಕ್ಷೆ ಮಾಡಲ್ಲವೇ?. ಎಲ್ಲಾ ರೀತಿಯ ಕೆಲಸ ಆಗ್ತಿದೆ. ಡಾಕ್ಟರ್ ಕೂಡ ಜೊತೆಯಲ್ಲಿದ್ದಾರೆ. ಟ್ಯಾಕ್ಸ್ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆದರೆ, ಸಂಬಳದಲ್ಲಿ 30ನೇ ಸ್ಥಾನದಲ್ಲಿದ್ದೇವೆ. ಎಸೆನ್ಶಿಯಲ್ ಹೊರತುಪಡಿಸಿ, ಯಾವುದೇ ಇತರೆ ಕೆಲಸ ಇರಲ್ಲ. ಸರ್ಕಾರದ ಬಗ್ಗೆ ನನಗೆ ಗೌರವ ಇದೆ. ಯಡಿಯೂರಪ್ಪ ಅವರ ಬಗ್ಗೆ ಗೌರವ ಇದೆ. ಅವರು ಸಭೆಯಲ್ಲಿ ಕೂಡ ಹೇಳಿದ್ರು ಎಂದರು.
ದುಡಿಯುವ ಸಮಯ ಹೆಚ್ಚಿಸಲಿ: ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬಳಕೆ ಬೆಲೆ ಹೆಚ್ಚಳ ಆಗಿದೆ. ಸರ್ಕಾರಿ ನೌಕರರ ಬಗ್ಗೆ ಮೃದು ಧೋರಣೆ ಇದೆಯಾ ಗೊತ್ತಿಲ್ಲ. ರಾಜ್ಯದ ಸರ್ಕಾರಿ ನೌಕರರಿಗೆ 12 ಸಾವಿರ ಕೋಟಿ ಖರ್ಚಾಗಲಿದೆ. ನಮಗೆ ಹೆಚ್ಚುವರಿ 16 ಪರ್ಸೆಂಟ್ ಮಾತ್ರ ವೆಚ್ಚ ಹೆಚ್ಚಾಗಲಿದೆ. ನಮಗೆ ಹೆಚ್ಚುವರಿ ಟ್ಯಾಕ್ಸ್ ಕಲೆಕ್ಟ್ ಮಾಡುವ ಜವಾಬ್ದಾರಿ ನೀಡಲಿ. ದುಡಿಯುವ ಸಮಯ ಹೆಚ್ಚಳ ಮಾಡಲಿ. ಎಲ್ಲದಕ್ಕೂ ನಾವು ಸಿದ್ದರಾಗಿದ್ದೇವೆ. ನಾಳೆ ಉಪ ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಮಾತ್ರ ಡ್ರೈವರ್ ನೀಡುತ್ತೇವೆ ಎಂದು ತಿಳಿಸಿದರು.
ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಲಿಖಿತ ಭರವಸೆಗೆ ನಾವು ರಾಜಿಯಾಗಲ್ಲ. ಸರ್ಕಾರಿ ಆದೇಶ ಆದರೆ ಮಾತ್ರ ನಾವು ಕೆಲಸಕ್ಕೆ ಹಾಜರಾಗುತ್ತೇವೆ. 12 ಸಾವಿರ ಕೋಟಿ ರೂ. ಹೆಚ್ಚುವರಿ ಹಣ ಬೇಕಾಗುತ್ತದೆ. ವೇತನ ಹೆಚ್ಚಳ ಉಳಿತಾಯದ ಹಣದ ಮೂಲಕ ಭರ್ತಿ ಮಾಡಬಹುದು ಎಂದ ಅವರು, ನಾಗರೀಕರು ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಸರ್ಕಾರಿ ನೌಕರರ ಪ್ರತಿಭಟನೆ: ಸಂಜೆ ಆಯೋಗ, ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಇತ್ಯರ್ಥ- ಸಿಎಂ