ಬೆಂಗಳೂರು: ಪರಿಶಿಷ್ಟ ಜಾತಿ ಅವರ ಮನೆ ನಿರ್ಮಾಣಕ್ಕೆ ನೀಡುವ ಧನಸಹಾಯವನ್ನು 5 ಲಕ್ಷ ರೂ.ಗೆ ಏರಿಕೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಸಮಾಜ ಕಲ್ಯಾಣ ಇಲಾಖೆಯ ಮೊದಲ ಸಭೆ ಕರೆದಿದ್ದೇವೆ. ಈ ವೇಳೆ, ಕೆಲವು ನಿರ್ಧಾರ ಮಾಡಲಾಗಿದೆ. ರಾಜ್ಯದಲ್ಲಿ 1.20 ಕೋಟಿ ಪರಿಶಿಷ್ಟ ಸಮಾಜದವರಿದ್ದಾರೆ. ಪರಿಶಿಷ್ಟ ಜಾತಿಯವರಿಗೆ ಮನೆ ಕಟ್ಟಲಿಕ್ಕೆ 1.75 ಲಕ್ಷ ರೂ. ಹಣ ನೀಡಲಾಗುತ್ತಿತ್ತು.
ಹೀಗಾಗಿ ಮನೆ ಕಟ್ಟಲಿಕ್ಕೆ ಆರ್ಥಿಕವಾಗಿ ತುಂಬಾ ಕಷ್ಟ ಆಗುತ್ತಿತ್ತು ಎಂಬ ವಿಚಾರಗಳು ಬೆಳಕಿಗೆ ಬಂದಿವು. ಹೀಗಾಗಿ ಮನೆ ಕಟ್ಟುವ ವೆಚ್ಚದ ಮಿತಿಯನ್ನು 5 ಲಕ್ಷಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಈ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಅವರಿಗೆ ಉತ್ತಮ ಶಿಕ್ಷಣ ಕೊಡಿಸಲು ಕೂಡ ಕ್ರಮ ವಹಿಸಿದ್ದೇವೆ ಎಂದರು.
ಓದಿ: SSLC ಫಲಿತಾಂಶ ಪ್ರಕಟ: ಬೇರೆಯವರಿಂದ ಪರೀಕ್ಷೆ ಬರೆಸಿದ್ದ ವಿದ್ಯಾರ್ಥಿನಿ ಡಿಬಾರ್, ಉಳಿದವರೆಲ್ಲರೂ ಪಾಸ್
ಒಂದು ವರ್ಷಗಳ ಕಾಲ ಅನಗತ್ಯ ವೆಚ್ಚಗಳನ್ನು ಕಡಿತ ಗೊಳಿಸಿ ಅನಿವಾರ್ಯವಲ್ಲದ ವೆಚ್ಚಗಳನ್ನು ಕಡಿತಗೊಳಿಸಲು ನಿರ್ಧಾರ ಮಾಡಿದ್ದೇವೆ. ಎಲ್ಲ ಬಡವರಿಗೆ ಮನೆ, ಶೌಚಾಲಯ, ವಿದ್ಯುತ್ ಸೌಕರ್ಯ ಸಿಗಬೇಕು. ಅಲ್ಲದೇ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತೆ ಆರೋಗ್ಯ ಸಿಗಬೇಕು ಎಂದರು.