ಬೆಂಗಳೂರು: ಮಾರ್ಚ್ ಒಳಗೆ ಏಳನೇ ವೇತನ ಆಯೋಗದ ವರದಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ನೀಡಿದರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಾ, ಏಳನೇ ಪರಿಷ್ಕೃತ ವೇತನವನ್ನು ಮಧ್ಯಂತರ ವರದಿ ಆಧಾರದಲ್ಲಿ ಜಾರಿಗೊಳಿಸುವುದಾಗಿ ಘೋಷಿಸಿದರು.
ಈಗಾಗಲೇ ಏಳನೇ ವೇತನ ಆಯೋಗ ರಚನೆ ಮಾಡಿದ್ದೇವೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ಅವರನ್ನು ಆಯೋಗದ ಅಧ್ಯಕ್ಷನಾಗಿ ನೇಮಕ ಮಾಡಿದ್ದೇವೆ. ಇದೇ ವರ್ಷ ವೇತನ ಆಯೋಗದ ಶಿಫಾರಸು ಜಾರಿಗೆ ತರುವ ಬದ್ಧತೆ ಇದೆ ಎಂದು ಸ್ಪಷ್ಟಪಡಿಸಿದರು. ಪೇ ಕಮಿಷನ್ಗೆ ಮಾರ್ಚ್ ತಿಂಗಳೊಳಗೆ ಮಧ್ಯಂತರ ವರದಿ ಕೊಡಲು ಹೇಳುತ್ತೇವೆ. ಮಧ್ಯಂತರ ವರದಿ ಅಧ್ಯಯನ ನಡೆಸಿ ಅದರ ಶಿಫಾರಸುಗಳನ್ನು ಜಾರಿಗೊಳಿಸುತ್ತೇವೆ. ಮಾರ್ಚ್ನಲ್ಲಿ ಮಧ್ಯಂತರ ವರದಿ ಆಧಾರದಲ್ಲಿ ಏಳನೇ ಪರಿಷ್ಕೃತ ವೇತನ ಜಾರಿಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಇದು ಜನಸ್ಪರ್ಶಿ ಬಜೆಟ್: 2022-23ರಲ್ಲಿ ಆದಾಯ ಕೊರತೆ ಬಜೆಟ್ ಮಂಡಿಸಿದ್ದೆವು. ಆದರೆ, ಈ ವರ್ಷ ಹೆಚ್ಚುವರಿ ಆದಾಯ ಸಾಧಿಸಲು ಸಾಧ್ಯವಾಗಿದೆ. ಜನರ ಮುಕ್ತವಾದ ಚಟುವಟಿಕೆಯಿಂದ ಆದಾಯ ಹೆಚ್ಚಿಸಲು ಸಾಧ್ಯವಾಗಿದೆ. ಈ ಬಾರಿ 3,09,000 ಬಜೆಟ್ ಮಂಡಿಸಿದ್ದೇನೆ. ಕಳೆದ ಬಾರಿಗೆ ಹೋಲಿದರೆ ಒಟ್ಟು ಶೇ.16ರಷ್ಟು ಬಜೆಟ್ ಗಾತ್ರ ಹೆಚ್ಚಾಗಿದೆ. ಆ ಮೂಲಕ ರಾಜ್ಯದ ಬೆಳವಣಿಗೆಯನ್ನು ಹೈಯರ್ ಗೇರ್ಗೆ ತಗೊಂಡಿದ್ದೇವೆ. ಕೇಂದ್ರ ಸರ್ಕಾರದ ಸಹಾಯಧನ ನೇರವಾಗಿ ಫಲಾನುಭವಿಗಳಿಗೆ ಹೋಗುತ್ತಿದೆ. ಒಟ್ಟಾರೆ ನಮ್ಮ ರಾಜಸ್ವ ಸ್ವೀಕೃತಿ ಶೇ.19ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಬೇರೆ ರಾಜ್ಯಗಳಲ್ಲಿ ವಿತ್ತೀಯ ಕೊರತೆ ಹೆಚ್ಚಾಗಿದೆ. ಅವುಗಳು ಆದಾಯ ಕೊರತೆಯಲ್ಲೇ ಇವೆ. ಆದರೆ ನಾವು ಆದಾಯ ಹೆಚ್ಚಳ ಮಾಡಲು ಸಫಲರಾಗಿದ್ದೇವೆ ಎಂದರು.
ಸಾಲ ಹೆಚ್ಚುಗಾರಿಕೆ ಆಗಿದ್ದು ಸಿದ್ದರಾಮಯ್ಯ ಕಾಲದಲ್ಲಿ: ನಾವು ಯಾವ ಕಾರಣಕ್ಕೆ ಸಾಲ ಬಳಸಿದ್ದೇವೆ ಎಂಬುದು ಮುಖ್ಯ. ನಾವು ಪಡೆದ ಸಾಲ ಸಂಪೂರ್ಣವಾಗಿ ಬಂಡವಾಳ ವೆಚ್ಚಕ್ಕೆ ಬಳಸಿದ್ದೇವೆ. ಅದನ್ನು ಆದಾಯ ವೆಚ್ಚಕ್ಕೆ ಬಳಸಿಲ್ಲ. 65ವರ್ಷದಲ್ಲಿ ರಾಜ್ಯ ಒಟ್ಟು 1,30,000 ಕೋಟಿ ಸಾಲ ಪಡೆದಿತ್ತು. ಸಿದ್ದರಾಮಯ್ಯ ತಮ್ಮ ಐದು ವರ್ಷದ ಅವಧಿಯಲ್ಲಿ 1,28,000 ಕೋಟಿ ರೂ. ಸಾಲ ಮಾಡಿದರು. ಅಲ್ಲಿಂದ ಸಾಲದ ಪ್ರಮಾಣ ಜಾಸ್ತಿಯಾಯಿತು. ನಾವು ಸಿಕ್ಕಾಪಟ್ಡೆ ಸಾಲ ಮಾಡಿದ್ದಾರೆ ಎಂಬುದು ಸುಳ್ಳು. ನಾವು ನಮ್ಮ ಮಿತಿಯೊಳಗೆ ಸಾಲ ಮಾಡಿದ್ದೇವೆ. ಸಾಲ ತೀರಿಸುವ ಕ್ಷಮತೆ ನಮಗೆ ಇದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಅಸಲು ಮತ್ತು ಬಡ್ಡಿ ಪಾವತಿಯನ್ನು ಎಂದೂ ನಾವು ಬಾಕಿ ಉಳಿಸಿಲ್ಲ. 2013-14ರಲ್ಲಿ ಸಿದ್ದರಾಮಯ್ಯ ಅವರು 13,400 ಕೋಟಿ ರೂ ಸಾಲ ಪಡೆದಿದ್ದರು. ಆ ಸಾಲದ ಅಸಲನ್ನು ನಾವು ಈಗ ತೀರಿಸಿದ್ದೇವೆ. ನಮ್ಮ ಅವಶ್ಯಕತೆಗೆ ಅನುಗುಣವಾಗಿ ನಾವು ಸಾಲ ಮಾಡಿದ್ದೇವೆ. 2013-2018 ರ ವರೆಗೆ 1,28,000 ಸಾಲ ಹೆಚ್ಚಾಗಿದೆ. ಸಾಲದ ಹೆಚ್ಚುಗಾರಿಕೆ ಕಾಂಗ್ರೆಸ್ ಕಾಲದಲ್ಲಿ ಆಗಿದೆ ಎಂದರು.
ನಮ್ಮದು ಸ್ಪಂದನಶೀಲ ಸರ್ಕಾರ ಆಗಿದೆ. ಅದಕ್ಕಾಗಿ ಮಕ್ಕಳ ಬಸ್ ಜಾರಿಗೊಳಿಸುತ್ತಿದ್ದೇವೆ. 2,000 ಬಸ್ಗಳ ಶೆಡ್ಯೂಲ್ ಹೆಚ್ಚಿಸಿ ಘೋಷಣೆ ಮಾಡಿದ ಸಿಎಂ. ಬಜೆಟ್ನಲ್ಲಿ 1 ಸಾವಿರ ಬಸ್ ಶೆಡ್ಯೂಲ್ ಘೋಷಣೆ ಮಾಡಲಾಗಿತ್ತು. ಅದನ್ನು ಈಗ 1 ಸಾವಿರ ಹೆಚ್ಚು ಬಸ್ ಶೆಡ್ಯೂಲ್ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.
ದುಡಿಯವ ಮಹಿಳೆಯರಿಗೆ 1,000 ರೂ. ಸಹಾಯಧನ: ಬಜೆಟ್ ಮೇಲಿನ ಉತ್ತರದ ವೇಳೆ ಸಿಎಂ ಬೊಮ್ಮಾಯಿ ದುಡಿಯುವ ಮಹಿಳಾ ಕೃಷಿ ಕಾರ್ಮಿಕರಿಗೆ 1 ಸಾವಿರ ಸಹಾಯಧನ ಹೆಚ್ಚಿಸಿ ಘೋಷಣೆ ಮಾಡಿದರು. ಬಜೆಟ್ನಲ್ಲಿ 500 ರೂ. ಘೋಷಿಸಲಾಗಿತ್ತು. ಅದನ್ನು ಸಿಎಂ ಈಗ 1000 ರೂ.ಗೆ ಏರಿಕೆ ಮಾಡುವುದಾಗಿ ಘೋಷಿಸಿದರು. ಬಜೆಟ್ನಲ್ಲಿ ಕೇವಲ 500 ರೂ. ಸಹಾಯಧನ ಪ್ರತಿಪಕ್ಷ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಇದೀಗ ಸಹಾಯಧನವನ್ನು 1,000 ರೂ.ಗೆ ಹೆಚ್ಚಿಸುವುದಾಗಿ ಸಿಎಂ ಘೋಷಣೆ ಮಾಡಿದರು.
ಅವರ ಕಾಲದಲ್ಲಿ ತರಾತುರಿಯಲ್ಲಿ ಟೆಂಡರ್: ತರಾತುರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಕಾಂಗ್ರೆಸ್ ಆಡಳಿತದಲ್ಲಿ 2017 ಮಾರ್ಚ್ 11,832 ಕೋಟಿ ಮೌಲ್ಯದ ಟೆಂಡರ್ ಕೊಟ್ಟಿದ್ದರು. ಮೂರು ತಿಂಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ಟೆಂಡರ್ ಕರೆದಿದ್ದರು. ಆದರೆ ನಾವು ಬರೇ 4,000 ಕೋಟಿ ರೂ. ಟೆಂಡರ್ ಕರೆದಿದ್ದೇವೆ. ಅವರ ಕಾಲದಲ್ಲಿ ತರಾತುರಿಯಲ್ಲಿ ಟೆಂಡರ್ ಕರೆಯಲಾಗಿತ್ತು ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಪ.ಜಾತಿ, ಪಂಗಡದ ಮಕ್ಕಳು ಶುಲ್ಕ ಪಾವತಿಸಿಲ್ಲವೆಂದು ಹಾಲ್ ಟಿಕೆಟ್ ನಿರಾಕರಿಸುವಂತಿಲ್ಲ- ಸೂಚನೆ