ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ-ಕಾಲೇಜುಗಳ ಪ್ರೌಢಾವಸ್ಥೆಯ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಸೇರಿದಂತೆ ನೈರ್ಮಲ್ಯ ಹಾಗೂ ಶುಚಿತ್ವದ ವಸ್ತುಗಳನ್ನು ಪೂರೈಸುವ `ಶುಚಿ ಯೋಜನೆ' ಅನುಷ್ಠಾನಕ್ಕೆ ಒಟ್ಟು 47 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಸ್ಪಷ್ಟಪಡಿಸಿದೆ.
ರಾಜ್ಯದ ಶಾಲೆಗಳ ಸ್ಥಿತಿಗತಿ ಹಾಗೂ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ `ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ' ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ನ್ಯಾ. ಪಿ. ಕಷ್ಣಭಟ್ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.
ವಿಚಾರಣೆಗೆ ಹಾಜರಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ಅವರು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶುಚಿ ಯೋಜನೆ ಅನುಷ್ಠಾನಕ್ಕೆ ಆರ್ಥಿಕ ಇಲಾಖೆಯಿಂದ 47 ಕೋಟಿ ರೂಪಾಯಿಗೆ ಮಂಜೂರಾತಿ ಸಿಕ್ಕಿದೆ. ಸಚಿವ ಸಂಪುಟದ ಒಪ್ಪಿಗೆ ಸಿಕ್ಕ ನಂತರ ಟೆಂಡರ್ ಕರೆಯಲಾಗುವುದು ಎಂದು ಪೀಠಕ್ಕೆ ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಮಾಹಿತಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್ 19ಕ್ಕೆ ಮುಂದೂಡಿತು. ಇದೊಂದು ಮಹತ್ವದ ಯೋಜನೆಯಾಗಿದ್ದು, ಸಮರ್ಪಕವಾಗಿ ಅನುಷ್ಟಾನಕ್ಕೆ ತಂದರೆ ಹೆಣ್ಣುಮಕ್ಕಳ ಸಬಲೀಕರಣದ ದಿಸೆಯಲ್ಲಿ ಪ್ರಮುಖ ಹೆಜ್ಜೆಯಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಶುಚಿ ಯೋಜನೆ ಅನುಷ್ಠಾನದ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿದ್ದ ಸರ್ಕಾರವನ್ನು ಕಳೆದ ವಿಚಾರಣೆ ವೇಳೆ ತರಾಟೆಗೆ ತೆಗೆದುಕೊಂಡಿದ್ದ ಪೀಠ, ಸರ್ಕಾರದ ನಿರ್ಲಕ್ಷಕ್ಕೆ ವಿದ್ಯಾರ್ಥಿನಿಯರು ನಿರ್ದಿಷ್ಟ ದಿನಗಳಲ್ಲಿ ಶಾಲಾ-ಕಾಲೇಜುಗಳಿಂದ ದೂರ ಉಳಿಯುವಂತಾಗಿದೆ. ಇದು ಶಿಕ್ಷಣದ ಹಕ್ಕು ಮತ್ತು ಮೂಲಭೂತ ಹಕ್ಕಿನ ಜೊತೆಗೆ ನೈರ್ಮಲ್ಯ, ಹೆಣ್ಣು ಮಕ್ಕಳ ಘನತೆ ಮತ್ತು ಖಾಸಗಿತನದ ವಿಚಾರವೂ ಆಗಿದೆ. ಸರ್ಕಾರ ಈ ರೀತಿ ನಡೆದುಕೊಂಡರೆ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಬಲೀಕರಣದ ಗುರಿ ಸಾಧಿಸಲು ಹೇಗೆ ಸಾಧ್ಯವಾಗುತ್ತದೆ. ಹೀಗಾಗಿ ಶುಚಿ ಯೋಜನೆ ಅನುಷ್ಠಾನದ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಖುದ್ದಾಗಿ ವಿವರಣೆ ನೀಡಬೇಕು ಎಂದು ತಾಕೀತು ಮಾಡಿತ್ತು.