ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆ ಮುಂದಿನ ಆಯವ್ಯಯದಲ್ಲಿ ಶಿಕ್ಷಣ,ನೀರಾವರಿ,ಗಂಗಾಕಲ್ಯಾಣ,ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡುವ ಮೂಲಕ ಪರಿಶಿಷ್ಟರು ಸ್ವಾವಲಂಬಿಗಳಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ.
ಆದಿ ಜಾಂಬವ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಹಾಗೂ ಕಚೇರಿಯ ವೆಬ್ಸೈಟ್ ಉದ್ಘಾಟಿಸಿ ಮಾತನಾಡಿದ ಅವರು, ಈ ನಿಗಮ ಈ ಹಿಂದೆಯೆ ಪ್ರಾರಂಭಗೊಂಡಿದ್ದರೂ ಪೂರ್ಣ ಪ್ರಮಾಣದ ಸಿಬ್ಬಂದಿ ವರ್ಗ ಹಾಗೂ ಸೌಕರ್ಯಗಳಿಲ್ಲದ ಕಾರಣ ಪ್ರತ್ಯೇಕ ಕೇಂದ್ರ ಕಚೇರಿಯೂ ಇರಲಿಲ್ಲ. ಈಗ ಪೂರ್ಣ ಪ್ರಮಾಣದ ಸಿಬ್ಬಂದಿ ಹಾಗೂ ಸೌಲಭ್ಯ ಒದಗಿಸಿ ಪ್ರತ್ಯೇಕ ಕೇಂದ್ರ ಕಚೇರಿ ಆರಂಭಿಸಲಾಗಿದೆ. ಈ ನಿಗಮದಿಂದ 2018-19 ಹಾಗೂ 2019-20 ನೇ ಸಾಲಿನಲ್ಲಿ ಸಮಗ್ರ ಗಂಗಾ ಕಲ್ಯಾಣ ಯೋಜನೆಯಡಿ 4540 ಫಲಾನುಭವಿಗಳಿಗೆ 187.25 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ ಎಂದರು.
ಭೂ ಒಡೆತನ ಯೋಜನೆಯಡಿ 54 ಕೋಟಿ ರೂ. ವೆಚ್ಚದಲ್ಲಿ 285 ಫಲಾನುಭವಿಗಳಿಗೆ ಜಮೀನು ಖರೀದಿಸಿ ನೀಡಲಾಗಿದೆ. ಸಮೃದ್ಧಿ ಯೋಜನೆಯಡಿ 118 ಕೋಟಿ ರೂ. ವೆಚ್ಚದಲ್ಲಿ 1134 ಫಲಾನುಭವಿಗಳಿಗೆ ನೆರವು ನೀಡಲಾಗಿದೆ. ಐರಾವತ ಯೋಜನೆಯಡಿ 86 ಕೋಟಿ ರೂ. ವೆಚ್ಚದಲ್ಲಿ 1,640 ಫಲಾನುಭವಿಗಳಿಗೆ ವಾಹನಗಳನ್ನು ವಿತರಿಸಲಾಗಿದೆ ಎಂದರು.
ಸ್ವಯಂ ಉದ್ಯೋಗ ಯೋಜನೆಯಡಿ 54 ಕೋಟಿ ರೂ. ವೆಚ್ಚದಲ್ಲಿ 1310 ಫಲಾನುಭವಿಗಳಿಗೆ, ಮೈಕ್ರೋ ಕ್ರೆಡಿಟ್ ಯೋಜನೆಯಡಿ 24.53 ಕೋಟಿ ರೂ. ವೆಚ್ಚದಲ್ಲಿ 10,000 ಫಲಾನುಭವಿಗಳಿಗೆ, ಪ್ರಾರಂಭಿಕ ಷೇರು ಬಂಡವಾಳ ಯೋಜನೆಯಡಿ 10 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಫಲಾನುಭವಿಗಳು ಈ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಸಾಮಾಜಿಕ,ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು. ರಾಜ್ಯ ಪರಿಷತ್ತಿನ ಸಭೆಯಲ್ಲಿ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಅನುಮೋದಿಸಿದ 30,445 ಕೋಟಿ ರೂ. ವೆಚ್ಚದ ಎಲ್ಲಾ ಕಾರ್ಯಕ್ರಮಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಈ ಯೋಜನೆಗಳ ಕುರಿತು ಮುಖ್ಯಮಂತ್ರಿಗಳು ಹಾಗೂ ತಾವು ಪ್ರಗತಿ ಪರಿಶೀಲನೆ ನಡೆಸಿದ್ದು, ಯಾವುದೇ ಅನುದಾನ ವ್ಯಯ ಆಗದಂತೆ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಬೇಕು ಎಂದು ಸಚಿವರು ಹೇಳಿದರು.