ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದ ರಾಜು ಹಾಗೂ ನಜೀರ್ ಅಹಮ್ಮದ್ ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಇಬ್ಬರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿ ಆದೇಶ ಹೊರಡಿಸಲಾಗಿದೆ. ಗೋವಿಂದ ರಾಜ್ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ವೇಳೆ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಸಿದ್ದರಾಮಯ್ಯರ ಆಪ್ತರಾಗಿರುವ ಗೋವಿಂದ ರಾಜ್ ಅವರನ್ನು ಇದೀಗ ತಮ್ಮ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಹೈಕೋರ್ಟ್ 2020ರ ಸಂಸದೀಯ ಕಾರ್ಯದರ್ಶಿ ನೇಮಕಾತಿ ರದ್ದುಪಡಿಸಿ ತೀರ್ಪು ನೀಡಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ದರ್ಜೆ ಸ್ಥಾನ ಮಾನ ನೀಡಿ ಇಬ್ಬರು ಎಂಎಲ್ಸಿಗಳಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಕಳೆದ ಬಾರಿ ಬೊಮ್ಮಾಯಿ ಸರ್ಕಾರದಲ್ಲೂ ರಾಜಕೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಪಿಐಎಲ್ ಹೂಡಲಾಗಿತ್ತು. ಈ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟೀಸ್ ನೀಡಿತ್ತು. ಇದೊಂದು ಅಸಂವಿಧಾನಿಕ ಹುದ್ದೆಯಾಗಿದ್ದು, ನಿಯಮದಲ್ಲಿ ಇದಕ್ಕೆ ಅವಕಾಶ ಇಲ್ಲ. ಜೊತೆಗೆ ಸಂಪುಟ ದರ್ಜೆ ನೀಡುವ ಮೂಲಕ ಅನಾವಶ್ಯಕ ಖರ್ಚಿನಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಲಿದೆ ಎಂದು ಪಿಐಎಲ್ ನಲ್ಲಿ ಆಕ್ಷೇಪಿಸಲಾಗಿತ್ತು.
ಕಾನೂನು ಸಲಹೆಗಾರರಾಗಿ ಪೊನ್ನಣ್ಣ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ನೇಮಕ ಮಾಡಲಾಗಿದೆ. ಸಂಪುಟ ದರ್ಜೆ ಸ್ಥಾನ ಮಾನ ನೀಡಿ ಲಭ್ಯವಿರುವ ಎಲ್ಲಾ ಸೌಲಭ್ಯ ನೀಡುವಂತೆ ಆದೇಶಿಸಲಾಗಿದೆ. ಎ.ಎಸ್.ಪೊನ್ನಣ್ಣ ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿದ್ದರು.
ಮುಖ್ಯಮಂತ್ರಿ ಸಲಹೆಗಾರರನ್ನಾಗಿ ಸುನೀಲ್ ಕುನಗೋಳ್ ನೇಮಕ: ಕಾಂಗ್ರೆಸ್ನ ಚುನಾವಣಾ ಚಾಣಾಕ್ಷ ಸುನೀಲ್ ಕನುಗೋಳು ಅವರನ್ನು ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರು ಎಂದು ನೇಮಿಸಿ ಸಂಪುಟ ದರ್ಜೆಯ ಸಚಿವರ ಸ್ಥಾನಮಾನದೊಂದಿಗೆ, ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಆದೇಶ ಹೊರಡಿಸಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಸುನೀಲ್ ಕನುಗೋಳು ಕಾಂಗ್ರೆಸ್ ಚುನಾವಣಾ ಸ್ಟ್ರೇಟಜಿಸ್ಟ್ ಆಗಿದ್ದು, ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಮುಖ್ಯ ಪಾತ್ರವಹಿಸಿದ್ದರು. ಚುನಾವಣಾ ಪೂರ್ವ ಗ್ಯಾರಂಟಿ ಕಾರ್ಡ್‌ಗಳನ್ನು ಹಂತ ಹಂತವಾಗಿ ಘೋಷಿಸಿ ಜನರ ಮನಮುಟ್ಟುವಂತೆ ಮಾಡುವಲ್ಲಿ ಕನುಗೋಳು ಪಾತ್ರ ಪ್ರಮುಖವಾಗಿದೆ. ಹೀಗಾಗಿ ಇದೀಗ ಸಿದ್ದರಾಮಯ್ಯ ಚುನಾವಣಾ ತಂತ್ರಗಾರನಿಗೆ ತಮ್ಮ ಮುಖ್ಯ ಸಲಹೆಗಾರನಾಗಿ ಮಣೆ ಹಾಕಿದ್ದಾರೆ.
ಪೊಲೀಸ್ ಇಲಾಖೆಯಲ್ಲೂ ಮಹತ್ವದ ಬದಲಾವಣೆ: ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಂದಾಗಿದೆ. ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ ಕಳೆದ ಮಂಗಳವಾರದಂದು ಆದೇಶಿಸಿತ್ತು. ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಆಗಿ ಸಿ. ಹೆಚ್. ಪ್ರತಾಪ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಎಂ.ಎ. ಸಲೀಂ ಅವರನ್ನು ಸಿಐಡಿ ಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಬಿ. ದಯಾನಂದ್ ಅವರನ್ನು ಬೆಂಗಳೂರು ಪೊಲೀಸ್ ಆಯುಕ್ತರನ್ನಾಗಿ ಸರ್ಕಾರ ನೇಮಿಸಿದೆ. ಕೆ.ವಿ ಶರತ್ ಚಂದ್ರ ಅವರನ್ನು ಗುಪ್ತಚರ ಎಡಿಜಿಪಿ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಆಟೋಚಾಲಕನ ಮೇಲೆ ಪೊಲೀಸ್ ಪೇದೆಯ ದರ್ಪ: ವಿಡಿಯೋ ವೈರಲ್