ಬೆಂಗಳೂರು: ಡಿಸಿಎಂ ಹುದ್ದೆ ರದ್ದು ವಿಚಾರವಾಗಿ ರಸ್ತೆ ಮೇಲಷ್ಟೇ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಪಕ್ಷದ ವೇದಿಕೆಯೊಳಗೆ ಚರ್ಚೆಯಾದ್ರೆ ಅದಕ್ಕೊಂದು ಗೌರವವಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಸಿಎಂ ಹುದ್ದೆ ರದ್ದುಪಡಿಸುವ ಕುರಿತಾಗಿ ರಾಷ್ಟ್ರ ಮಟ್ಟದ ನಾಯಕರು ಸಿಎಂ ಜೊತೆ ಚರ್ಚಿಸಿದ್ರೆ ಅದಕ್ಕೆ ಗೌರವ ಇದೆ. ಹೊರಗಡೆ ಚರ್ಚೆಯಾದರೆ ಅದಕ್ಕೆ ಯಾವುದೇ ಗೌರವವಿಲ್ಲ ಎಂದು ಪರೋಕ್ಷವಾಗಿ ರೇಣುಕಾಚಾರ್ಯಗೆ ಟಾಂಗ್ ನೀಡಿದರು.
ಪಕ್ಷದ ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ಇಲ್ಲವೇ ಎಂಬ ಪ್ರಶ್ನೆಗೆ, ಯಾರ ಅಭಿಪ್ರಾಯಕ್ಕೆ ಬೆಲೆ ಕೊಡಬೇಕು, ಯಾರಿಗೆ ಬೆಲೆ ಕೊಡಬಾರದು ಎಂಬುದು ನನಗೆ ಗೊತ್ತಿದೆ. ನಾನು ಯಾವುದಕ್ಕೂ ಜೋತು ಬೀಳುವ ವ್ಯಕ್ತಿ ಅಲ್ಲ. ಪಕ್ಷ ಏನು ಮಾಡಬೇಕು, ಮಾಡಬಾರದು ಅನ್ನೋದನ್ನು ತೀರ್ಮಾನ ಮಾಡುತ್ತದೆ. ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಯಾರೇ ಆದರೂ ಅವರ ಇತಿಮಿತಿಯೊಳಗೆ ಮಾತನಾಡಬೇಕು. ಡಿಸಿಎಂ ಹುದ್ದೆಗಳ ಬಗ್ಗೆ ತೀರ್ಮಾನ ಮಾಡಿರೋದು ನಮ್ಮ ನಾಯಕರಾದ ಯಡಿಯೂರಪ್ಪ, ಹೈಕಮಾಂಡ್ ನಾಯಕರು ಹಾಗೂ ಬಿ.ಎಲ್.ಸಂತೋಷ್ ಅವರು. ಇವರು ಈ ಬಗ್ಗೆ ಚರ್ಚೆ ಮಾಡಿದ್ರೆ ಬೆಲೆ ಇರುತ್ತದೆ. ಇವರನ್ನು ಬಿಟ್ಟು ಉಳಿದವರು ಚರ್ಚಿಸಿದ್ರೆ ಅದಕ್ಕೆ ಯಾವುದೇ ಬೆಲೆ ಇಲ್ಲ ಎಂದರು.