ಬೆಂಗಳೂರು:ಎರಡನೇ ದಿನದ ಅಹೋರಾತ್ರಿ ಧರಣಿ ನಡೆಸುತ್ತಿರುವ ಮಹಾದಾಯಿ ಹೋರಾಟಗಾರರು ರಾಜ್ಯಪಾಲರ ಮೇಲೆ ನಂಬಿಕೆ ಇದೆ. ಅವರನ್ನು ಭೇಟಿಯಾಗೇ ಆಗುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ.
ನ್ಯಾಯಾಧಿಕರಣದ ಆದೇಶದಂತೆ ಉತ್ತರ ಕರ್ನಾಟಕಕ್ಕೆ ಮಹದಾಯಿ, ಕಳಸಾ-ಬಂಡೂರಿ ಯೋಜನೆಯ ನೀರು ಕೊಡಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ರೈತರು ಮನವಿ ಸಲ್ಲಿಸಲು ಬಂದಿದ್ದಾರೆ.
ಆದ್ರೆ, ಈವರೆಗೂ ರಾಜ್ಯಪಾಲರ ಭೇಟಿಗೆ ಅವಕಾಶ ಸಿಗದ ಕುರಿತು ಮಾತನಾಡಿದ ರೈತಮುಖಂಡ ವೀರೇಶ ಸೊಬರದಮಠ, ರಾಜ್ಯಪಾಲರು ನಮ್ಮ ತಂದೆ ಸಮಾನ, ರಾಜ್ಯಪಾಲರು ನಮ್ಮನ್ನ ಭೇಟಿಯಾಗ್ತಾರೆ ಎಂಬ ನಂಬಿಕೆ ಇದೆ. ಅವರಿಲ್ಲದಿದ್ದರೆ ಬೇರೆ ಯಾರೂ ಇಲ್ಲ. ಈಗ ಏನೋ ಕೆಲಸ ಇರಬಹುದು ಮಗಿಸಿ ಬರ್ತಾರೆ ಅನ್ನೋ ನಂಬಿಕೆ ಇದೆ. ಪ್ರೋಟೋಕಾಲ್ ಪ್ರಕಾರ ಭೇಟಿಯಾಗುವ ಅವಕಾಶವನ್ನು ಅಧಿಕಾರಿಗಳು ಮಾಡಿಕೊಡಲಿದ್ದಾರೆ ಎಂದರು.
ಉತ್ತರ ಕರ್ನಾಟಕದ ರೈತರಿಗೆ ನೀರು ಬೇಕೇ ಬೇಕು. ನಮ್ಮ ಪ್ರಾಣ ಹೋದರೂ ಚಿಂತೆ ಇಲ್ಲ. ನಮ್ಮ ರೈತರಿಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ. ಹೊಲಕ್ಕೆ ನೀರು ಹರಿಸುತ್ತೇವೆ ಎಂದು ಸೂರ್ಯ ಚಂದ್ರರ ಮೇಲೆ ಪ್ರಮಾಣ ಮಾಡಿ ಬಂದಿದ್ದೇವೆ. ಉತ್ತರ ಕರ್ನಾಟಕದ ಅನೇಕ ರೈತರ ಮಕ್ಕಳು ನಗರದ ಐಟಿಬಿಟಿ ಕಂಪೆನಿಯಿಂದ ಕೆಲಸ ಕಳೆದುಕೊಂಡಿದ್ದಾರೆ. ರಾಜಕಾರಣಿಗಳು, ಪಕ್ಷದ ಮುಖಂಡರ ಬಗ್ಗೆ ನಮಗೆ ನಂಬಿಕೆ ಇಲ್ಲ. ನಾವು ಓಟು, ನೋಟು, ಅಧಿಕಾರ ಕೊಟ್ಟು ಮನೆಯ ಅನ್ನವನ್ನೂ ಉಣಿಸಿದ್ದೇವೆ. ಆದರೆ ನಮ್ಮ ಹೋರಾಟವನ್ನು ಅವರು ಧಿಕ್ಕರಿಸಿದ್ದಾರೆ. ಇದರಿಂದ ಪಾಠ ಕಲಿಯಬೇಕಾಗಿದೆ.
ಮಹಾದಾಯಿ ವಿಚಾರದಲ್ಲಿ ರಾಜಕೀಯ ಮುಖಂಡರಿಗೆ ಧೈರ್ಯ, ತಾಕತ್ತಿಲ್ಲ. ಮೋದಿ, ಅಮಿತ್ ಷಾ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಅವರಿಗೆ ಹೇಳಬೇಕಾಗಿಲ್ಲ. ರಾಜ್ಯದ ನಾಯಕರಿಗೇ ನಮ್ಮ ಕಷ್ಟ ಅರ್ಥವಾಗ್ತಿಲ್ಲ ಎಂದು ಛೀಮಾರಿ ಹಾಕಿದರು.