ಬೆಂಗಳೂರು: ವಿಧಾನಮಂಡಲದಲ್ಲಿ ಅಂಗೀಕಾರಗೊಂಡ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ಭೂಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.
ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಶಿಕ್ಷಕರ ಕೊರತೆ ನೀಗಿಸಲು, ಪರಸ್ಪರ ಕೋರಿಕೆ ವರ್ಗಾವಣೆಗೆ ಅವಕಾಶ ನೀಡುವ ಸಂಬಂಧ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ ಅನುಷ್ಠಾನಕ್ಕೆ ತರಲಾಗಿದೆ.
ಶಿಕ್ಷಕರು ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ ಭಾಗಕ್ಕೆ ವರ್ಗಾವಣೆ ತೆಗೆದುಕೊಳ್ಳಬಹುದೇ ಹೊರತು, ಅಲ್ಲಿಂದ ಬೇರೆಡೆಗೆ ಅವಕಾಶ ಇಲ್ಲ. ಐದು ವರ್ಷಗಳ ಕಾಲ ಒಂದು ಕಡೆ ಕಾರ್ಯನಿರ್ವಹಿಸಿದ ಶಿಕ್ಷಕರಿಗೆ ಒಮ್ಮೆ ಪರಸ್ಪರ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೊದಲು ಈ ನಿಯಮವು ಏಳು ವರ್ಷ ಸೇವೆ ಸಲ್ಲಿಸಿದವರಿಗೆ ಇತ್ತು. ಇದನ್ನು ಸಡಿಲಿಕೆ ಮಾಡಿ ಐದು ವರ್ಷ ಮಾಡಲಾಗಿದೆ.
ರೈತರು ಮಾಡಿಕೊಂಡಿರುವ ಭೂ ಒತ್ತುವರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದನ್ನು ತಪ್ಪಿಸುವ ಸಂಬಂಧ ಕರ್ನಾಟಕ ಭೂಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕ ಅನುಷ್ಠಾನ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಿಂದ 18 ಕಿಮೀ, ನಗರ ಪಾಲಿಕೆಯ ವ್ಯಾಪ್ತಿಯಿಂದ 10 ಕಿಮೀ, ನಗರಸಭೆ ವ್ಯಾಪ್ತಿಯಿಂದ 5 ಕಿಮೀ, ಪುರಸಭೆ, ಪಟ್ಟಣ ಪಂಚಾಯಿತಿಯಿಂದ 3 ಕಿ.ಲೋ ಮೀಟರ್ ವ್ಯಾಪ್ತಿಗೆ ಅನ್ವಯವಾಗದಂತೆ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಮೊದಲ ತರಗತಿಗೆ ಮಗು ಪ್ರವೇಶಕ್ಕೆ ಆರು ವರ್ಷ ವಯೋಮಿತಿ ನಿಗದಿ: 2025 - 26 ರಿಂದ ಜಾರಿಗೆ ಚಿಂತನೆ: ನಾಗೇಶ್