ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ಮೀಸಲಾತಿ ನಿಗದಿಪಡಿಸುವಾಗ ಲೋಪದೋಷಗಳು ಉಂಟಾಗಿದ್ದರಿಂದ 2018 ರ ಸೆಪ್ಟೆಂಬರ್‌ನಲ್ಲಿ ಪ್ರಕಟಿಸಲಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಅಧಿಸೂಚನೆ ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.
ಮೀಸಲಾತಿ ನಿಗದಿಯಲ್ಲಿನ ಲೋಪದೋಷಗಳ ವಿರುದ್ಧ ಜನಪ್ರತಿನಿಧಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಉತ್ತರಿಸಿ, ಮೀಸಲಾತಿ ಅಧಿಸೂಚನೆ ವಾಪಾಸು ಪಡೆಯುವ ನಿರ್ಧಾರ ತಿಳಿಸಿದರು.
ರಾಜ್ಯ ಸರ್ಕಾರವೇ ಮೀಸಲಾತಿ ಅಧಿಸೂಚನೆ ಹಿಂದಕ್ಕೆ ಪಡೆಯುವುದಾಗಿ ಹೈಕೋರ್ಟ್ಗೆ ತಿಳಿಸಿದ್ದರಿಂದ ಮೀಸಲಾತಿ ವಿವಾದ ಸದ್ಯಕ್ಕೆ ಬಗೆಹರಿದಿದೆ. ನ್ಯಾಯಾಲಯ ಸರ್ಕಾರದ ಭರವಸೆ ಮೇರೆಗೆ ಮೇಲ್ಮನವಿಗಳನ್ನು ವಿಲೇವಾರಿ ಮಾಡಿದೆ.