ಬೆಂಗಳೂರು: ಮಾಹಿತಿ ಹಕ್ಕಿನ ಅಡಿಯಲ್ಲಿ ಹೆಚ್ಚು ಬಾರಿ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಜೂನ್ 6 ರಂದು ಹೊರಡಿಸಿದ್ದ ನಿರ್ದೇಶನವನ್ನು ಇದೀಗ ಹಿಂಪಡೆದುಕೊಂಡಿದೆ.
ಜೂನ್ 6ರಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಮಾಹಿತಿ ಹಕ್ಕಿನ ಅಡಿ ಹೆಚ್ಚು ಬಾರಿ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸುವಂತೆ ಸೂಚನೆ ನೀಡಿತ್ತು. ಆ ಮೂಲಕ ಮಾಹಿತಿ ಹಕ್ಕು ಅಧಿನಿಯಮದಡಿ ಸಾರ್ವಜನಿಕರ ಅಧಿಕಾರವನ್ನು ಸರ್ಕಾರ ನಿಯಂತ್ರಿಸಲು ಹೊರಟಿದೆ ಎಂಬ ಆರೋಪ, ಟೀಕೆಗಳು ಕೇಳಿ ಬಂದಿದ್ದವು. ಸರ್ಕಾರದ ಈ ನಡೆ ಆರ್ಟಿಐ ಅರ್ಜಿದಾರರನ್ನು ಹತ್ತಿಕ್ಕಲು ಮುಂದಾಗಿದೆಯಾ ಎಂಬ ಅನುಮಾನವೂ ಮೂಡಿತ್ತು. ಇದೀಗ ಆ ನಿರ್ದೇಶನವನ್ನು ಸರ್ಕಾರ ವಾಪಸ್ ಪಡೆದಿದೆ.
ಈ ಸಂಬಂಧ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಮುನೀಷ್ ಮೌದ್ಗಿಲ್ ಅವರು ಎಲ್ಲ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರ ತಮ್ಮ ಹೃದಯ ಹಾಗೂ ಅಂತಃಕರಣದಿಂದ ಮಾಹಿತಿ ಹಕ್ಕು ಅಧಿನಿಯಮವನ್ನು ಜನಪರವಾಗಿ ಹಾಗೂ ಶಾಸನಬದ್ಧವಾಗಿ ಚಾಲನೆಗೆ ತರಲು ಹಾಗೂ ಅನುಪಾಲಿಸಲು ಬದ್ಧವಾಗಿರುತ್ತದೆ. ಸರ್ಕಾರದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಹಿತಿ ಹಕ್ಕು ಅಧಿನಿಯಮ -2005 ಅನ್ನು ಶಾಸನ ಬದ್ಧವಾಗಿ ಅನುಪಾಲಿಸತಕ್ಕದ್ದು ಎಂದು ತಿಳಿಸಿದ್ದಾರೆ.
ಮಾಹಿತಿ ಹಕ್ಕು ಅಧಿನಿಯಮದಲ್ಲಿ ಮಾಹಿತಿ ಹಕ್ಕು ಕೇಳಿರುವ ಅರ್ಜಿದಾರರ ಬಗ್ಗೆ ಬೇರೆ ಯಾರು ಮಾಹಿತಿ ಪಡೆಯಲು ಅವಕಾಶ ಇರುವುದಿಲ್ಲ. ಎಲ್ಲ ನಾಗರಿಕರಿಗೆ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮುಕ್ತವಾಗಿ ಮಾಹಿತಿ ಪಡೆಯಲು ಶಾಸನಬದ್ಧ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಸು-ತರಬೇತಿ ಮತ್ತು ಮಾಹಿತಿ ಹಕ್ಕು ಶಾಖೆ)ಯ ಸರ್ಕಾರದ ಅಧೀನ ಕಾರ್ಯದರ್ಶಿ ಸರ್ಕಾರದಿಂದ ಯಾವುದೇ ಅನುಮತಿ ಅಥವಾ ಆದೇಶ ಪಡೆಯದೇ ಆರ್ಟಿಐ ಅಡಿ ಅರ್ಜಿಗಳನ್ನು ಸಲ್ಲಿಸುವ ಅರ್ಜಿದಾರರ ಮಾಹಿತಿಯನ್ನು ಒದಗಿಸುವ ಕುರಿತು ಪತ್ರ ಮೂಲಕ ಕೋರಿರುತ್ತಾರೆ. ಈ ಪತ್ರವನ್ನು ಸರ್ಕಾರದಿಂದ ಯಾವುದೇ ಅನುಮತಿ ಅಥವಾ ಗಮನಕ್ಕೆ ತರದೇ ಜಾರಿಯಾಗಿರುವ ಕಾರಣಕ್ಕಾಗಿ ಆ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಮುನೀಷ್ ಮೌದ್ಗಿಲ್ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆಗೆ ಹೆಚ್ಚಿದ ಒತ್ತಾಯ: ನವೆಂಬರ್ನಲ್ಲಿ ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆ