ಬೆಂಗಳೂರು: ರಿಚಾರ್ಜ್ ಮಾಡಿ ಬಳಸುವ ಮೊಬೈಲ್ ಮಾದರಿಯಲ್ಲೇ ರಾಜ್ಯದಲ್ಲಿನ ವಿದ್ಯುತ್ ಗ್ರಾಹಕರು ಮೊದಲು ಹಣ ಪಾವತಿಸಿ ಬಳಿಕ ವಿದ್ಯುತ್ ಬಳಸುವಂತೆ ಮಾಡಲು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆಗೆ ಇಂಧನ ಇಲಾಖೆ ಸಿದ್ಧತೆ ನಡೆಸಿದೆ. ಸದ್ಯದಲ್ಲೇ ಪ್ರಿಪೇಯ್ಡ್ ಮೀಟರ್ ಅಳವಡಿಕೆಗೆ ಚಾಲನೆ ನೀಡಿ 2023ರ ಡಿಸೆಂಬರ್ ವೇಳೆಗೆ ಎಲ್ಲಾ ಮೀಟರ್‌ಗಳನ್ನೂ ಪ್ರಿಪೇಯ್ಡ್ ಆಗಿಸಲು ಚರ್ಚೆ ನಡೆಯುತ್ತಿದೆ.
ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ವ್ಯಾಪ್ತಿಯಲ್ಲೂ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸುವಂತೆ ಕೇಂದ್ರ ಇಂಧನ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಹಿಂದೆಯೇ ನಿರ್ದೇಶನ ನೀಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗ್ರಾಪಂಗೆ ವಿದ್ಯುತ್ ಬಿಲ್ ಹೊರೆ ತಪ್ಪಿಸಿದ ಸೋಲಾರ್.. ಸೌರಶಕ್ತಿಯಿಂದಲೇ 88 ಮನೆಗಳಿಗೆ ನೀರು ಪೂರೈಕೆ
ಈ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗಳಿಗೂ ಮೀಟರ್ ಅಳವಡಿಸುವಂತೆ ಸೂಚಿಸಲಾಗಿದೆ. ಇದೇ ಕಾರಣಕ್ಕೆ ಯೋಜನೆ ಜಾರಿಗೆ ಹಿನ್ನಡೆಯಾಗಿದೆ. ಆದರೆ, ಇದೀಗ ಕೇಂದ್ರ ಸರ್ಕಾರ ನೀಡುವ ಶೇ.15 ರಷ್ಟು ಸಬ್ಸಿಡಿಗಾಗಿ ಪ್ರಿಪೇಯ್ಡ್ ಮೀಟರ್ ಅಳವಡಿಕೆಗೆ ಮುಂದಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಸರಬರಾಜು ವ್ಯವಸ್ಥೆ ಸುಧಾರಿಸಿ ಆದಾಯ ಸೋರಿಕೆ ತಡೆಯಲು ಕೇಂದ್ರ ಇಂಧನ ಇಲಾಖೆಯು ರೀವ್ಯಾಂಪ್ಡ್ ಡಿಸ್ಟ್ರಿಬ್ಯೂಷನ್ ಸೆಕ್ಟರ್ ಸ್ಕಿಮ್ ಹೆಸರಿನಲ್ಲಿ ಯೋಜನೆ ರೂಪಿಸಿದೆ. ಪ್ರಸ್ತುತ ತಾಂತ್ರಿಕ ಸಮಸ್ಯೆ ಹಾಗೂ ವಿದ್ಯುತ್ ಸೋರಿಕೆಯಿಂದ ಉಂಟಾಗುತ್ತಿರುವ ಎ ಟಿ ಮತ್ತು ಸಿ ನಷ್ಟವನ್ನು (ಅಗ್ರಿಗೇಟ್ ಟೆಕ್ನಿಕಲ್ ಆ್ಯಂಡ್ ಕಮರ್ಷಿಯಲ್ ಲಾಸ್) ಶೇ.12 ರಿಂದ 15ರಷ್ಟು ಕಡಿಮೆ ಮಾಡಲು ಹಾಗೂ 2024-25ರ ವೇಳೆಗೆ ಶೂನ್ಯಕ್ಕೆ ತರಲು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮುಂದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇದನ್ನೂ ಓದಿ: ಮಳೆ ನೀರಲ್ಲೇ ಕರೆಂಟ್ ಉತ್ಪಾದಿಸುವ ರೈತ.. ಪ್ರತಿದಿನ ಮನೆಗಳಿಗೆ 250 ಮೆಘಾವ್ಯಾಟ್ ವಿದ್ಯುತ್!