ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಕ್ಕೆ ನೆರವಾಗಲು ಸರ್ಕಾರ ಮುಂದಾಗಿದೆ. ಬೆಂಗಳೂರಿಗೆ ಹೊಸ ರೂಪ ನೀಡುವುದರ ಜೊತೆಗೆ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ 'ಬೆಂಗಳೂರು ಮಿಷನ್ 2020' ಯೋಜನೆ ಜಾರಿ ಹಾಗೂ ಬಡವರ ಖರೀದಿಸುವ ಫ್ಲಾಟ್‌ಗಳಿಗೆ ಮುದ್ರಾಂಕ ಶುಲ್ಕ ಕಡಿತಗೊಳಿಸುವ ಮೂಲಕ ರಿಯಲ್ ಎಸ್ಟೇಟ್ ಉದ್ಯಮವನ್ನು ಅಭಿವೃದ್ಧಿಗೊಳಿಸುವ ಹೆಜ್ಜೆ ಇಟ್ಟಿದೆ.
ಬೆಂಗಳೂರು ಮಿಷನ್ 2022 ಯೋಜನೆಯಿಂದ ನಗರದ ಹೆಗ್ಗಳಿಕೆ, ಸೌಂದರ್ಯ ಇನ್ನಷ್ಟು ಹೆಚ್ಚಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ನಗರದ ಪ್ರಮುಖ ಸಮಸ್ಯೆಯಾಗಿರುವ ಸಂಚಾರ ದಟ್ಟಣೆ ನಿವಾರಿಸಿ, ಸುಗಮ ಸಂಚಾರ ಕಲ್ಪಿಸುವುದು, ಸ್ವಚ್ಛ ಸುಂದರ ನಗರ ನಿರ್ಮಾಣ ಮಾಡುವ ಮೂಲಕ ಮೂಲಸೌಕರ್ಯ ಅಭಿವೃದ್ಧಿಯೂ ಸರ್ಕಾರದ ಗುರಿಯಾಗಿದೆ.
ಕೋವಿಡ್‌ನಿಂದಾಗಿ ಎಲ್ಲ ಕ್ಷೇತ್ರಗಳಂತೆಯೇ ರಿಯಲ್ ಎಸ್ಟೇಟ್ ಕ್ಷೇತ್ರವೂ 2020ರಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ವರ್ಷದ ಕೊನೆಯಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿ ಉದ್ಯಮ ಸಹಜ ಸ್ಥಿತಿಯತ್ತ ಮರಳಿದೆಯಾದರೂ, 2021ರಲ್ಲಿ ಒಟ್ಟಾರೆ ಕ್ಷೇತ್ರದ ಸ್ವರೂಪದಲ್ಲಿ ಹೆಚ್ಚು ಬದಲಾವಣೆಯಾಗುವ ನಿರೀಕ್ಷೆ ಇದೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ಈಗಾಗಲೇ ರಿಯಲ್ ಎಸ್ಟೇಟ್ ಕಂಪನಿಗಳು ಸಿದ್ಧತೆ ನಡೆಸಿವೆ ಎನ್ನಲಾಗಿದೆ.
ರಾಜ್ಯದ ಆದಾಯದಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಬೆಂಗಳೂರಿನಿಂದಲೇ ಆದಾಯ ಬರುತ್ತಿದೆ. ಆದ್ದರಿಂದ, ಬೆಂಗಳೂರನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಸರ್ಕಾರ ಮುಂದಾಗಿದ್ದು, ನಗರದ ಸುತ್ತಮುತ್ತ ನಿರ್ಮಾಣವಾಗುತ್ತಿರುವ ಮನೆಗಳು, ಫ್ಲ್ಯಾಟ್, ಅಪಾರ್ಟ್‌ಮೆಂಟ್ ಹಾಗೂ ಬಡಾವಣೆ ಮೇಲೆ ಶೇ. 50 ರಿಂದ 60 ರಷ್ಟು ಬಂಡವಾಳ ಹೂಡುತ್ತಿದ್ದಾರೆ. ಕೆಲವರು ಫ್ಲ್ಯಾಟ್ ಹಾಗೂ ಅಪಾರ್ಟ್ ಮೆಂಟ್ ಮೇಲೆ ಬಂಡವಾಳ ಹೂಡಿಕೆ ಆಸಕ್ತಿ ತೋರಿದ್ದಾರೆ. ಇನ್ನು ಉಳಿದವರು ನಿವೇಶನಗಳ ಖರೀದಿ ಮೇಲೆ ಬಂಡವಾಳ ಹೂಡುತ್ತಿದ್ದಾರೆ.
ಮುದ್ರಾಂಕ ಶುಲ್ಕ ಕಡಿತ: ಅಫೋರ್ಡೆಬಲ್ ಮನೆಗಳನ್ನು ನಿರ್ಮಿಸುತ್ತಿರುವ ಬಿಲ್ಡರ್‌ಗಳಿಗೆ ಮುದ್ರಾಂಕ ಶುಲ್ಕ ಕಡಿತದಿಂದ ಬಹಳ ಅನುಕೂಲವಾಗಿದೆ. 20 ಲಕ್ಷ ರೂ.ವರೆಗಿನ ಫ್ಲ್ಯಾಟ್‌ಗಳಿಗೆ ಶೇ.5ರಿಂದ ಶೇ.2ಕ್ಕೆ ಇಳಿಕೆ. 20ರಿಂದ 35 ಲಕ್ಷ ರೂ.ಮೌಲ್ಯದ ಫ್ಲ್ಯಾಟ್ ಗಳಿಗೆ ಶೇ.5ರಿಂದ ಶೇ.3ಕ್ಕೆ ಇಳಿಕೆ ಮಾಡಿ ಮುದ್ರಾಂಕ ಶುಲ್ಕ ಕಡಿತ ಗೊಳಿಸಲಾಗಿದೆ. ಇದರಿಂದ ಅಪಾರ್ಟ್‌ಮೆಂಟ್ ಖರೀದಿಸುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂಬುದು ರಿಯಲ್ ಎಸ್ಟೇಟ್ ಉದ್ಯಮಿಗಳ ಅಭಿಪ್ರಾಯ.
ಬಿಲ್ಡರ್ಗಳು ನಗರದ ಸುತ್ತಮುತ್ತ ಹೊಸ ವಸತಿ ನಿರ್ಮಾಣ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಗ್ರಾಹಕರಿಗೂ ವಿಶೇಷ ಆಫರ್‌ಗಳನ್ನು ನೀಡಿವೆ. ಶೇ.10 ಬಂಡವಾಳ ಹೂಡಿದರೆ ಬಾಕಿ ಹಣವನ್ನು ಸಾಲವಾಗಿ ಪಡೆಯುವ ಅವಕಾಶ ಕಲ್ಪಿಸಿವೆ. ಇದರಿಂದ ಬಡವರು ಹಾಗೂ ಮಧ್ಯಮ ವರ್ಗದ ಜನರು ನಿವೇಶಗಳನ್ನು ಖರೀದಿಸಲು ಹೆಚ್ಚಿನ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.