ಬೆಂಗಳೂರು : ರಾಜ್ಯದಲ್ಲಿ ದಿನೇದಿನೆ ಕೇಸರಿ ಶಾಲು-ಹಿಜಾಬ್ ಹೆಸರಿನಲ್ಲಿ ಕೋಮುದ್ವೇಷ ಹರಡಲಾಗುತ್ತಿದೆ. ಇದನ್ನು ರಾಜ್ಯ ಸರ್ಕಾರ ಹತೋಟಿಗೆ ತರಬೇಕು ಎಂದು ಸಮಾನ ಮನಸ್ಕ ಸಂಘಟನೆಗಳು ಆಗ್ರಹಿಸಿವೆ.
ತೀವ್ರ ಚರ್ಚೆಗೆ ಗ್ರಾಸವಾಗಿರುವ ಕೇಸರಿ-ಹಿಜಾಬ್ ಸಂಘರ್ಷದಿಂದ ರಾಜ್ಯದಲ್ಲಿ ಕೋಮುಗಲಭೆಯ ವಾತಾವರಣ ನಿರ್ಮಾಣವಾಗಿದೆ. ಹಿಜಾಬ್ ಹೆಸರಿನಲ್ಲಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಕೋಮುಭಾವನೆ ಮೂಡಿಸಲಾಗುತ್ತಿದೆ.
ಇದರ ಹಿಂದೆ ರಾಜ್ಯ ಸರ್ಕಾರದ ಕುತಂತ್ರ ಅಡಗಿದೆ. ಆಗಿರುವ ಲೋಪದೋಷ ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬೃಹತ್ ಪ್ರತಿರೋಧ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿವೆ.
ಈ ಬಗ್ಗೆ ಮಾತನಾಡಿದ ಹಿರಿಯ ವಕೀಲ ಬಾಲನ್, ಹಿಜಾಬ್ ಹೆಸರಿನಲ್ಲಿ ರಾಜ್ಯ ಸರ್ಕಾರ ಕೋಮುಭಾವನೆಯ ವಿಷಬೀಜ ಬಿತ್ತಿದೆ. ಇದು ಅಶಾಂತಿಗೆ ಕಾರಣವಾಗಿದೆ. ಶಾಲೆಗಳಲ್ಲಿ ಕೋಮು ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವಿಂಗಡಿಸಿ, ಅವರ ಮನಸ್ಸಿನಲ್ಲಿ ಧರ್ಮದ ವಿಷಬೀಜ ಬಿತ್ತುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಿಜಾಬ್ ತೀರ್ಪು ಕಾಯ್ದಿರಿಸಿದ ಹೈಕೋರ್ಟ್: ಕೊನೆಯ ದಿನ ನಡೆದ ವಾದ-ಪ್ರತಿವಾದಗಳೇನು!?
ಕರ್ನಾಟಜ ಜನಶಕ್ತಿ ಸಂಘಟನೆ ಅಧ್ಯಕ್ಷೆ ಬಿ ಟಿ ಲಲಿತಾ ನಾಯಕ್ ಮಾತನಾಡಿ, ಹಿಜಾಬ್ ಸಂಘರ್ಷದಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಧಾರ್ಮಿಕ ಆಚರಣೆ ಮುಂದಿಟ್ಟುಕೊಂಡು ಕಾಲೇಜು ಗೇಟುಗಳ ಹೊರಗೆ ನಿಲ್ಲಿಸುವುದು ಎಷ್ಟು ಸರಿ?. ಕೊರೊನಾ ಹಿನ್ನೆಲೆ ಎರಡು ವರ್ಷ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿಲ್ಲ. ಇದೀಗ ಈ ರೀತಿ ಕುತಂತ್ರ ರೂಪಿಸಿ ಹಿಜಾಬ್ ವಿವಾದ ತೆಗೆದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.