ಬೆಂಗಳೂರು: ನೂತನವಾಗಿ ಸರ್ಕಾರಿ ಪ್ರಾರ್ಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು ಮೀನಮೇಷ ಎಣಿಸುತ್ತಿದ್ದ ಅಧಿಕಾರಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿರುವ ಹೈಕೋರ್ಟ್, ಮಕ್ಕಳ ಶಿಕ್ಷಣದ ಕುರಿತು ಜಪಾನ್ ದೇಶದಿಂದ ರಾಜ್ಯ ಸರ್ಕಾರ ಕಲಿತುಕೊಳ್ಳಬೇಕಾಗಿದೆ ಎಂದು ತಿಳಿಸಿದೆ.
ಬೆಂಗಳೂರು-ಮೈಸೂರು ರಸ್ತೆ ಅಗಲೀಕರಣಕ್ಕಾಗಿ ಶಾಲೆಯ ಕಟ್ಟಡ ಮತ್ತು ಜಮೀನನ್ನು ಬಿಟ್ಟುಕೊಟ್ಟು ಪರಿಹಾರವನ್ನು ಪಡೆದಿದ್ದರೂ, ನೂತನವಾಗಿ ಶಾಲೆ ನಿರ್ಮಿಸಲು ಸ್ಥಳಾವಕಾಶ ಒದಗಿಸದೇ ಮತ್ತು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಗರಲಿಂಗನ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ(ಎಸ್‌ಡಿಎಂಸಿ) ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಜಪಾನ್ ದೇಶದ ಕ್ರಮ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೆ, ಜಪಾನ್ ದೇಶದದ ಹೊಕ್ಕೈಡೋ ಎಂಬ ದ್ವೀಪದ ಹಳ್ಳಿಯೊಂದರಲ್ಲಿ ರೈಲು ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿತ್ತು. ಆದರೆ, ವಿದ್ಯಾರ್ಥಿನಿಯೊಬ್ಬಳು ರೈಲಿನಲ್ಲಿ ಪ್ರಯಾಣಿಸಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂಬ ಅಂಶವನ್ನು ಅರಿತು ಆ ಒಂದೇ ವಿದ್ಯಾರ್ಥಿನಿ ಪ್ರೌಢ ಶಿಕ್ಷಣದಿಂದ ಪದವಿಯವರೆಗೂ ಶಿಕ್ಷಣ ಮುಂದುವರೆಸಲು ರೈಲ್ವೆ ನಿಲ್ದಾಣ ಮತ್ತು ರೈಲು ಸಂಚಾರ ಮುಂದುವರೆಸಿತ್ತು.
ಈ ಅಂಶ ಬಹಿರಂಗವಾಗುತ್ತಿದ್ದಂತೆ ಜಪಾನ್ ದೇಶದ ಸರ್ಕಾರಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ನಮ್ಮ ಸರ್ಕಾರಿ ಅಧಿಕಾರಿಗಳು, ಶಾಲೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದೆ ಮಕ್ಕಳ ಶಿಕ್ಷಣ ಹಕ್ಕುಗಳನ್ನು ಹರಣ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದೆ.
ಮಣ್ಣಿನ ಹಗ್ಗ ಮಾಡಿ ಎಳೆಯುವುದನ್ನು ಬಿಡಲಾಗದು: ಸಂವಿಧಾನದ ಪರಿಚ್ಛೇದ 21ಎ ರ ಅಡಿ ಶಿಕ್ಷಣ ಪಡೆಯುವುದು ಮಕ್ಕಳ ಮೂಲಭೂತ ಹಕ್ಕಾಗಲಿದೆ. ಇದನ್ನು ಕೇವಲ ಮಣ್ಣಿನ ಹಗ್ಗದಂತೆ ಮಾಡಿ ಎಳೆಯುವಂತೆ ಮಾಡುವುದಕ್ಕೆ ನ್ಯಾಯಾಲಯ ಅವಕಾಶ ನೀಡುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಅಷ್ಟೇ ಅಲ್ಲದೆ, ಮುಂದಿನ ಸೆಪ್ಟಂಬರ್ ಅಂತ್ಯದ ವೇಳೆ ಶಾಲೆಗೆ ಅಗತ್ಯವಿರುವ ಭೂಮಿ ಮತ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಈ ಸಂಬಂಧದ ಆದೇಶದ ಅನುಷ್ಠಾನದ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಸರ್ಕಾರಿ ಶಾಲೆಗಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ: ಪ್ರಸ್ತುತ ಯಾವುದೇ ಸೌಲಭ್ಯಗಳಿಲ್ಲದ ಕಟ್ಟಡದಲ್ಲಿ ಶಾಲೆ ನಡೆಯುತ್ತಿರುವ ಕುರಿತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅಧಿಕಾರಿಗಳು ಎಸ್‌ಡಿಎಂಸಿ ಮನವಿಯನ್ನು ಪರಿಗಣಿಸದೇ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕುನ್ನು ಉಲ್ಲಂಘಿಸುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಸರ್ಕಾರಿ ಶಾಲೆಗಳನ್ನು ಅಧಿಕಾರಿಗಳು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದೆ ಎಂದು ತಿಳಿಸಿದೆ.
ಪ್ರಕರಣ ಹಿನ್ನೆಲೆ: ಬೆಂಗಳೂರು - ಮೈಸೂರು ಹೆದ್ದಾರಿಗೆ ಹೊಂದಿಕೊಂಡಿರುವ ಅಗರಲಿಂಗ ದೊಡ್ಡಿಯಲ್ಲಿ ಸರ್ಕಾರಿ ಶಾಲೆ ನಡೆಯುತ್ತಿತ್ತು. ಈ ಮಾರ್ಗವನ್ನು ಎಕ್ಸ್‌ಪ್ರೆಸ್‌ವೇಯನ್ನಾಗಿ ಮೇಲ್ದರ್ಜೆಗೇರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎ)ವು ಶಾಲೆಯ ಜಾಗ ಮತ್ತು ಕಟ್ಟಡವನ್ನು ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೆ, 66.95 ಲಕ್ಷ ರೂ.ಗಳ ಪರಿಹಾರವನ್ನು ನೀಡಿತ್ತು. ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೂ 25 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರಸ್ತುತ ಶೌಚಾಲಯ ಮತ್ತು ಅಗತ್ಯ ಸೌಲಭ್ಯಗಳಿಲ್ಲದ ಖಾಸಗಿ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ.
ಈ ನಡುವೆ ಶಾಲೆಗೆ ಬಂದಿದ್ದ ಪರಿಹಾರ ಮೊತ್ತದಲ್ಲಿ ಶಾಲೆಗೆ ಜಾಗ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಅನುಮತಿ ನೀಡುವಂತೆ ಕೋರಿ ಎಸ್‌ಡಿಎಂಸಿ ಸದಸ್ಯರು ಮಡ್ಯ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದಾರೆ. ಆದ್ರೆ ಮನವಿ ಕುರಿತು ಪರಿಶೀಲಿಸಿ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಅಲ್ಲದೆ, ಪರಿಹಾರ ಮೊತ್ತವನ್ನು ರಾಜ್ಯದ ನಿಧಿಗೆ ಜಮಾ ಮಾಡುವಂತೆ ಸೂಚನೆಯನ್ನೂ ನೀಡಿದ್ದರೂ. ಸುಮಾರು ಮೂರು ವರ್ಷ ಕಳೆದರೂ ಸರ್ಕಾರ ಮತ್ತು ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿ ಎಸ್‌ಡಿಎಂಸಿ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಮೈಸೂರು ಎನ್‌ಟಿಎಂ ಶಾಲೆ ಉಳಿವಿಗೆ ನಿರಂತರ ಹೋರಾಟ: ರಚಿತಾ ರಾಮ್